ಪುತ್ತೂರು|| ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗೆ ಖಂಡನೆ: ಬಿಜೆಪಿಯಿಂದ ಪ್ರತಿಭಟನೆ
ರಾಷ್ಟ್ರೀಯ ವಿಚಾರಧಾರೆಗಳಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಹಿಂದುಗಳನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿರ್ಲಕ್ಷಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಡಾ. ನವೀನ್ ಹೇಳಿದರು.
ಪುತ್ತೂರು ಅಮರ ಜವಾನ್ ಸ್ಮಾರಕದ ಬಳಿ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಕೃಷಿ ಹಾಗೂ ಕೃಷಿ ಕ್ಷೇತ್ರಕ್ಕೆ 1.50 ಲಕ್ಷ ಕೋಟಿ ರೂಪಾಯಿಯನ್ನು ಬಿಜೆಪಿ ಸರ್ಕಾರ ನೀಡಿದೆ. ಇಂತಹ ಕೊಡುಗೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿಲ್ಲ. ಎಲ್ಲಾ ರೀತಿಯಲ್ಲೂ ರೈತರನ್ನು ವಿರೋಧಿಸುವ ಕಾರ್ಯವನ್ನೇ ಮಾಡುತ್ತಿದ್ದು, ಬರವನ್ನು ನಿಭಾಯಿಸುವ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿದೆ ಎಂದು ಕುಟುಕಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ರಾಜ್ಯದ ಸುಮಾರು 190 ತಾಲೂಕುಗಳು ಬರಪೀಡಿತವಾಗಿದೆ. ಬರ ಪೀಡಿತ ಪ್ರದೇಶಗಳ ಅಧ್ಯಯನವನ್ನು ಮಾಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಿಂದ ಹೊರ ಬರುತ್ತಿಲ್ಲ. ತನ್ನ ಹುದ್ದೆಯ ನಾಲ್ಕು ಕಾಲುಗಳು ಯಾವಾಗ ಅಲುಗಾಡುತ್ತದೋ ಎಂದು ತಿಳಿಯದೆ, ಮುಖ್ಯಮಂತ್ರಿಗಳು ಕುರ್ಚಿ ಬಿಟ್ಟು ಏಳುತ್ತಿಲ್ಲ ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬುಡಿಯಾರು ರಾಧಾಕೃಷ್ಣ ರೈ,ಆಶಾ ತಿಮ್ಮಪ್ಪ ಗೌಡ ಜಗನ್ನಿವಾಸ ರಾವ್, ಮಾಜಿ ಶಾಸಕ ಸಂಜೀವ ಮಠಂದೂರು,ಚನಿಲ ತಿಮ್ಮಪ್ಪ ಶೆಟ್ಟಿ ಆರ್. ಸಿ. ನಾರಾಯಣ ಮೊದಲಾದವರು ಪಾಲ್ಗೊಂಡಿದ್ದರು.