ಬೀದಿಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ಪಟ್ಟು ಬಿಡದೆ ಮುಖ್ಯ ಮಂತ್ರಿ ಭೇಟಿ ಮಾಡಿದ ಬೀದಿಬದಿ ವ್ಯಾಪಾರಿಗಳು.

ಮಂಗಳೂರು : ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗೆ 2014ರ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ 2014 ಮತ್ತು ಕರ್ನಾಟಕ ಬೀದಿಬದಿ ವ್ಯಾಪಾರ ನಿಯಮ 2019 ರಂತೆ ಮಂಗಳೂರಿನಲ್ಲಿ ಅವಕಾಶ ನೀಡದೆ ದಾಳಿಗಳನ್ನು ನಡೆಸಿ,ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ನೀಡದೆ ಸತಾಯಿಸುತ್ತಿರುವ ವಿಚಾರವಾಗಿ ಬೀದಿಬದಿ ವ್ಯಾಪಾರಿಗಳು ಅನೇಕ ಹೋರಾಟಗಳನ್ನು ನಡೆಸುತ್ತಿದೆಯಾದರೂ, ರಾಜಕೀಯ ಒತ್ತಡದಿಂದಾಗಿ ಬೀದಿಬದಿ ವ್ಯಾಪಾರಿಗಳನ್ನು ನಿರ್ಲಕ್ಷ್ಯ ಮಮಾಡುತ್ತಿರುವ ಅಧಿಕಾರಿಗಳ ವಿರುದ್ಧ ದೂರು ನೀಡಲಿಕ್ಕಾಗಿ ಇಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೀದಿ ವ್ಯಾಪಾರಿಗಳ ಸಂಘದ ನಿಯೋಗ ಭೇಟಿ ಮಾಡಿ ಅಹವಾಲು ಸಲ್ಲಿಸಿತು.

ಮುಖ್ಯ ಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘವು ನಿನ್ನೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಮುಖ್ಯ ಮಂತ್ರಿಗಳ ಭೇಟಿಗೆ ಅವಕಾಶ ನೀಡುವಂತೆ ಕೋರಿತು.ಆದರೆ ಪೋಲಿಸರು ಅವಕಾಶ ನಿರಾಕರಿಸಿದರು. ಇಂದು ಮುಖ್ಯ ಮಂತ್ರಿಗಳು ಭಾಗವಹಿಸುವ ಫಲಾನುಭವಿಗಳ ಸಮಾವೇಶವು ನಡೆಯುತ್ತಿರುವ ಕರಾವಳಿ ಮೈದಾನ ಕಡೆ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮತ್ತು ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್ ನೇತ್ರತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಸ್ಥರು ಕಾರ್ಯಕ್ರಮದ ಮುಖ್ಯ ದ್ವಾರದ ಬಳಿ ಜಮಾಯಿಸಿದರು.ಮುಖ್ಯ ಮಂತ್ರಿಗಳ ಭೇಟಿ ಮಾಡಲು ಅವಕಾಶ ನೀಡಲೇಬೇಕೆಂದು ಪಟ್ಟು ಹಿಡಿದರು.ಅವಕಾಶ ಸಿಗದೆ ಇದ್ದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದರು.

ಆಗ ಪೊಲೀಸರು ಪ್ರತಿಭಟನೆ ನಡೆಸಿದರೆ ಬಂಧಿಸುವ ಎಚ್ಚರಿಕೆ ನೀಡಿದರು. ಪೋಲೀಸರ ಎಚ್ಚರಿಕೆಗೆ ಜಗ್ಗದ ಬೀದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗುವ ತೀರ್ಮಾನ ಮಾಡಿದಾಗ ಪೋಲಿಸರು ಪಟ್ಟು ಸಡಿಲಿಸಿ 10 ಮಂದಿ ಬೀದಿ ವ್ಯಾಪಾರಿಗಳ ಪ್ರತಿನಿಧಿಗಳಿಗೆ ಮುಖ್ಯ ಮಂತ್ರಿಯನ್ನು ಭೇಟಿ ಮಾಡಲು ಅವಕಾಶ ನೀಡಿದರು .10 ಮಂದಿ ಪ್ರತಿನಿಧಿಗಳನ್ನು ಪೋಲಿಸ್ ಬಂದುಬಸ್ತ್ ನಲ್ಲಿ ಗಣ್ಯರ ಗ್ಯಾಲರಿಯಲ್ಲಿ ಕುಳ್ಳಿರಿಸಿದರು.ಮುಖ್ಯ ಮಂತ್ರಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಬೀದಿ ವ್ಯಾಪಾರಿಗಳು ಘೋಷಣೆ ಕೂಗಲು ಭಿತ್ತಿ ಪತ್ರ ಹಿಡಿಯಲು ಪ್ರಯತ್ತಿಸುತ್ತಿದ್ದಂತೆ ಮುಖ್ಯ ಮಂತ್ರಿ ನೇರವಾಗಿ ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿಗಳ ಬಳಿ ಬಂದು ಮನವಿ ಸ್ವೀಕರಿಸಿ ಜೊತೆಯಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಬೀದಿ ವ್ಯಾಪಾರಿಗಳ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಸೂಚಿಸಿದರು.ಮುಖ್ಯ ಮಂತ್ರಿಗಳೊಂದಿಗೆ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಅವರು ಸರಕಾರ ಸ್ವನಿಧಿ ಯೋಜನೆ ಅಡಿಯಲ್ಲಿ ಸಾಲ‌ ನೀಡುತ್ತಿದೆ.

ಆದರೆ ಸಾಲ ಮರು ಪಾವತಿ ಮಾಡಲು ವ್ಯಾಪಾರ ಮಾಡಲು ಅವಕಾಶ ನೀಡಬೇಕು.ನಗರ ಪಾಲಿಕೆ ಬೀದಿ ವ್ಯಾಪಾರಿಗಳ ಬೇಡಿಕೆಗಳನ್ನು ರಾಜಕೀಯ ಒತ್ತಡಗಳಿಂದ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಮುಖ್ಯ ಮಂತ್ರಿಗಳ ಗಮನ ಸೆಳೆದರು. ಮುಖ್ಯ ಮಂತ್ರಿಗಳ ಭೇಟಿ ಮಾಡಿದ ನಿಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃಧಿ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಸಂಘದ ಸಂಸ್ಥಾಪಕ ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್,ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮುಖಂಡರಾದ ಆಸೀಫ್ ಬಾವ ಉರುಮನೆ, ಸಂತೋಷ್ ಆರ್ ಎಸ್, ಪ್ರವೀಣ್ ಕದ್ರಿ,ಅಬ್ದುಲ್ ರಹಿಮಾನ್ ಅಡ್ಯಾರ್, ಮೇಬಲ್ ಡಿಸೋಜ, ಸಿದ್ದಮ್ಮ,ಆದಂ ಬಜಾಲ್, ಎಂ.ಕೆ.ರಿಯಾಝ್, ಇಸ್ಮಾಯಿಲ್ ಉಳ್ಳಾಲ, ನೌಷದ್ ಉಳ್ಳಾಲ, ಮೇರಿ ಡಿಸೋಜ,ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.