ಕನ್ನಡ ಸಾಹಿತ್ಯ ಸಮ್ಮೇಳನ : ಕನ್ನಡ ತಾಯಿಗೆ ಸ್ವರಾಭಿಷೇಕಗೈದ ‘ಸುಮಧುರ ಗೀತೆಗಳ ಗಾಯನ’

ಉಜಿರೆ, ಫೆ 6: ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ರವಿವಾರ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ಘಟ್ಟದಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಸುಮಧುರ ಗೀತೆಗಳ ಗಾಯನದ ಮೂಲಕ ಸ್ವರಾಭಿಷೇಕವೇ ನಡೆಯಿತು. ಆ ಮೂಲಕ ಮೂರು ದಿನಗಳ ಅಕ್ಷರ ಜಾತ್ರೆ ಪೂರ್ಣ ಮುಕ್ತಾಯ ಕಂಡಿತು.
“ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು..” “ಕರುನಾಡ ತಾಯಿ ಸದಾ ಚಿನ್ಮಯಿ..” ಮುಂತಾದ ಗೀತೆಗಳ ಮೂಲಕ ಸ ರಿ ಗ ಮ ಪ ಖ್ಯಾತಿಯ ಗಾಯಕ ರಜತ್ ಮಯ್ಯ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಂತ್ಯವನ್ನೂ ಅಮೋಘವನ್ನಾಗಿಸಿದರು. ಪ್ರೇಕ್ಷಕರ ಅನನ್ಯ ಪ್ರತಿಕ್ರಿಯೆ ಹಾಗೂ ಒತ್ತಾಯದ ಮೇರೆಗೆ ಆನಂದಾಶ್ಚರ್ಯಗಳಿಗೊಳಗಾಗಿ ಮತ್ತಷ್ಟು ಹಾಡುಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನ ತಣಿಸುವ ಪ್ರಯತ್ನ ಮಾಡಿದರು.
“ಕಾಣದ ಕಡಲಿಗೆ ಹಂಬಲಿಸಿದೆ ಮನ..”, “ಈ ಭೂಮಿ ಬಣ್ಣದ ಬುಗುರಿ..”, ಹೇ ರುಕ್ಕಮ್ಮ..” ಮುಂತಾದ ಹಾಡುಗಳನ್ನು ಹಾಡಿದರಲ್ಲದೆ, ಸಭಿಕರೂ ತನ್ನೊಂದಿಗೆ ಹಾಡುವಂತೆ ಮಾಡಿ ಸಂಗೀತ ಸಂಜೆಯ ಮೆರುಗನ್ನು ಇಮ್ಮಡಿಗೊಳಿಸಿದರು. ಆನಂದತುಂದಿಲರಾದ ಪ್ರೇಕ್ಷಕರು ಕೈಗಳನ್ನು ಹಾಡಿನ ಮೋಡಿಗೆ ಲಯಬದ್ಧವಾಗಿ ಅತ್ತಿಂದಿತ್ತ ಇತ್ತಿಂದತ್ತ ಬೀಸುತ್ತ ಕುಳಿತಲ್ಲೇ ಲಘುವಾಗಿ ನರ್ತಿಸಲು ಆರಂಭಿಸಿ ಕಾರ್ಯಕ್ರಮದ ಅಂತ್ಯದ ವೇಳೆಗೆ ಕುಣಿಯಲು ಆರಂಭಿಸಿದರು.
ಗಾಯಕರ ಹಾಡಿಗೆ ತಂದೆ ರಮೇಶ್ ಮಯ್ಯ ಅವರು ಕಾರ್ಯಕ್ರಮ ನಿರೂಪಣೆ ಮಾಡಿದ್ದು, ಅಮ್ಮನ ಪ್ರೀತಿಯನ್ನು ವರ್ಣಿಸುವ ಸಾಲುಗಳಿಗೆ ವೇದಿಕೆಗೆ ತನ್ನ ತಾಯಿಯನ್ನೇ ಗಾಯಕರು ಕರೆಸಿ ಎಲ್ಲರಿಗೂ ಪರಿಚಯಿಸಿದ್ದು ಮತ್ತೊಂದು ವಿಶೇಷವಾಗಿತ್ತು.
ವರದಿ : ರಕ್ಷಾ ಕೋಟ್ಯಾನ್,
ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ
ಚಿತ್ರ: ಶಶಿಧರ ನಾಯ್ಕ,
ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ