ಕ್ರಿಯಾತ್ಮಕ ಚಿಂತನೆಗಳಿಂದ ಜೀವನದಲ್ಲಿ ಯಶಸ್ಸು ಸಾಧ್ಯ – ಪ್ರೊ. ಎನ್ ದಿನೇಶ್ ಚೌಟಾ

ಉಜಿರೆ: “ಕ್ರಿಯಾಶೀಲತೆ, ಧೈರ್ಯ, ಸಾಮರ್ಥ್ಯ ಮತ್ತು ಸಂವಹನ ಕೌಶಲಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸತತ ಪ್ರಯತ್ನ ಹಾಗೂ ಏಕಾಗ್ರತೆಯಿಂದ ಜೀವನದಲ್ಲಿ ಗೆಲುವು ಸಾಧಿಸಬಹುದು” ಎಂದು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್ ದಿನೇಶ್ ಚೌಟಾ ಹೇಳಿದರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಜ್ಞಾನ ವಿಭಾಗವು ಆಯೋಜಿಸಿದ್ದ 2022ನೇ ಸಾಲಿನ ವಿಜ್ಞಾನಸಿಂಚನ ಎಂಬ ಅಂತರ್ ಕಾಲೇಜು ವಿಜ್ಞಾನ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ವಿಜ್ಞಾನ ಸಿಂಚನದ ನಾಮಫಲಕವನ್ನು ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. “ವಿಶೇಷ ಚಿಂತನೆಯಿಂದ ವಿಜ್ಞಾನ ವಿಭಾಗದಲ್ಲಿ ಹಲವು ಆವಿಷ್ಕಾರಗಳನ್ನು ಮಾಡಬಹುದು. ಅದಕ್ಕೆ ಪೂರಕವಾಗುವಂತೆ ಎಸ್. ಡಿ. ಎಂ ಕಾಲೇಜಿನ ವಿಜ್ಞಾನ ವಿಭಾಗವು ಉತ್ತಮ ಕೆಲಸ ಮಾಡುತ್ತಿದೆ. ವಿಜ್ಞಾನ ಸಿಂಚನ ಕಾರ್ಯಕ್ರಮವು ಅನೇಕ ಸೃಜನಾತ್ಮಕ ಚಟುವಟಿಕೆಗಳಿಂದ ಕೂಡಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗುತ್ತದೆ” ಎಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ ಪಿ. ಎನ್. ಉದಯಚಂದ್ರ ರವರು ಸ್ಪರ್ಧಾರ್ಥಿಗಳನ್ನು ಪ್ರೋತ್ಸಾಹಿಸಿದರು. ಸಸ್ಯಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ, ಮನಃಶಾಸ್ತ್ರ, ಸಂಖ್ಯಾಶಾಸ್ತ್ರ, ಜೈವಿಕ ತಂತ್ರಜ್ಞಾನ ಮತ್ತು ಗಣಕಯಂತ್ರ ವಿಜ್ಞಾನ ವಿಭಾಗಗಳಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ ನಂತರ ಸಮಾರೋಪ ಸಮಾರಂಭ ನಡೆಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ರವರು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಚಾಂಪಿಯನ್ ಶಿಪ್ ಪ್ರಶಸ್ತಿ ಮತ್ತು ಮೂಡಬಿದ್ರೆಯ ಆಳ್ವಾಸ್ ಪದವಿ ಕಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಚಾಂಪಿಯನ್ ಶಿಪ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ಶಶಿಶೇಖರ್ ಎನ್ ಕಾಕತ್ಕರ್, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕುಮಾರ್ ಹೆಗ್ಡೆ, ಕಾರ್ಯಕ್ರಮದ ಸಂಯೋಜಕಿಯಾದ ಪೂಜಿತಾ ವರ್ಮಾ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಧರು, ಅಧ್ಯಾಪಕರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.