ಎಸ್.ಡಿ.ಎಂ ಭೌತಶಾಸ್ತ್ರ ‘ಇವೆಂಟ್ ಹಾರಿಜನ್’ ಉತ್ಸವ

ಉಜಿರೆ, ಜೂನ್ 6: ಪರಿಸರಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ನೈಸರ್ಗಿಕ ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ ಹೊಳೆಸುವ ಆಲೋಚನಾ ಕ್ರಮಗಳು ಭೌತಶಾಸ್ತ್ರ ಮತ್ತು ಜೀವವಿಜ್ಞಾನದ ಸಂಶೋಧನಾತ್ಮಕ ಪ್ರಜ್ಞೆಯಿಂದ ನಿರೂಪಿತವಾಗುತ್ತವೆ ಎಂದು ಉಜಿರೆ ಎಸ್‍ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ. ಅಭಿಪ್ರಾಯಪಟ್ಟರು.
ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗ ಮತ್ತು ಫಿಜಿಕಾ ಸಂಘದ ಸಹಯೋಗದಲ್ಲಿ ‘ಇವೆಂಟ್ ಹಾರಿಜಾನ್’ ಶಿರ್ಷಿಕೆಯಡಿ ಸೋಮವಾರ ಆಯೋಜಿತವಾದ ಅಂತರ್ ಕಾಲೇಜು ಮಟ್ಟದ ಶೈಕ್ಷಣ ಕ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆ, ತಾಪಮಾನ ಏರಿಕೆಯಂತಹ ನೈಸರ್ಗಿಕ ಬಿಕ್ಕಟ್ಟುಗಳು ಹಲವು ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಭೌತಶಾಸ್ತ್ರ ಮತ್ತು ಜೀವವಿಜ್ಞಾನ ವಲಯಗಳೆರಡರ ಹೊಣೆಗಾರಿಕೆ ವಿಶೇಷವಾದದ್ದು. ಈ ವಲಯಗಳಲ್ಲಿ ನಡೆಯುವ ಹೊಸ ಆವಿಷ್ಕಾರ, ವ್ಯಕ್ತವಾಗುವ ಚಿಂತನೆ ಮತ್ತು ಹೊಳೆಯಲ್ಪಡುವ ಹೊಸ ಆಲೋಚನೆಗಳು ನೈಸರ್ಗಿಕ ಬಿಕಟ್ಟುಗಳಿಗೆ ಶಾಶ್ವತ ಪರಿಹಾರದ ದಾರಿ ತೋರಿಸುವಷ್ಟರ ಮಟ್ಟಿಗೆ ಸಶಕ್ತವಾಗಿವೆ ಎಂದರು.

ವಿಜ್ಞಾನ ಕ್ಷೇತ್ರಕ್ಕೆ ಭೌತಶಾಸ್ತ್ರವು ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಗಳು ಜೀವಶಾಸ್ತ್ರದ ಕೊಂಡಿಯಾದ ಭೌತಶಾಸ್ತ್ರಕ್ಕೆ ಬೆಸೆದುಕೊಂಡಿದೆ. ಇಂತಹ ವಿಷಯಗಳ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ನಡೆಸಬೇಕು, ಹೊಸ ಸಂಶೋಧನೆಗಳು ಹೆಚ್ಚಿನ ಜ್ಞಾನ ನೀಡುವುದರ ಜೊತೆಗೆ ಜಿಜ್ಞಾಸೆ ಮನೋಭಾವನೆಯನ್ನು ರೂಪಿಸುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‍ಡಿಎಂ ಸ್ನಾತಕೋತ್ತ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ ಮಾತನಾಡಿ ಪರಿಸರ ದಿನಾಚರಣೆಯ ಮಹತ್ವವನ್ನು ವಿಶ್ಲೇಷಿಸಿದರು. ಕೃತಕ ಬುದ್ದಿಮತ್ತೆ, ರೋಬೋಟ್ ಮತ್ತು ಉಪಗ್ರಹ ಉಡಾವಣೆ ಈ ವಿಷಯಗಳ ಸಂಬಂಧಿಸಿದಂತೆ ಅಧ್ಯಯನ ನಡೆಸುವವರಿಗೆ ಭೌತವಿಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಎಸ್ ಮಾತನಾಡಿದರು. ವಿಭಾಗ ಕೈಗೊಂಡ ಕಾರ್ಯಚಟುವಟಿಕೆಗಳು ಮತ್ತು ಹಿರಿಯ ವಿದ್ಯಾರ್ಥಿಗಳ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಸ್‍ಡಿಎಂ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶಶಿಶೇಖರ್. ಎನ್. ಕಾಕತ್ಕರ್, ಸಹಾಯಕ ಪ್ರಾಧ್ಯಾಪಕ ಡಾ. ಹಾಲೇಶಪ್ಪ ಡಿ ಉಪಸ್ಥಿತರಿದ್ದರು. ದೀಪಾ, ಅಶ್ವಿನ್ ಅತಿಥಿಗಳನ್ನು ಪರಿಚಯಿಸಿದರು. ಶ್ರೀವಿದ್ಯಾ ಪ್ರಾರ್ಥಿಸಿದರು. ಪರಿಕ್ಷೀತ್ ನಿರೂಪಿಸಿ, ಸಂಧ್ಯಾ ಬಿ.ಎಸ್. ವಂದಿಸಿದರು.