ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’, ‘ಸಂಸ್ಕೃತಸಂಧ್ಯಾ’
ಉಜಿರೆ, ಸೆ.9: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸೆ.8ರಂದು ಸಂಸ್ಕೃತ ವಿಭಾಗದ ವತಿಯಿಂದ ‘ಸಂಸ್ಕೃತೋತ್ಸವ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಣೆಗಾರ ವಸಂತ ಮಂಜಿತ್ತಾಯ ಅವರು, “ಸಂಸ್ಕೃತವು ಭಾರತೀಯ ಭಾಷೆಗಳ ಮಾತೃ ಸ್ವರೂಪಿಯಾಗಿದೆ. ಸಂಸ್ಕೃತವು ನಮ್ಮ ಜೀವನ ಶೈಲಿ, ನಮ್ಮ ಸಂಸ್ಕಾರ ಹಾಗೂ ಸಂಸ್ಕೃತಿಯೂ ಹೌದು” ಎಂದರು.
“ನಮ್ಮ ಜೀವನದ ಮೇಲೆ ಸಂಸ್ಕೃತವು ಬೀರುವ ಪ್ರಭಾವದ ಅಗಾಧತೆಯು ನಾನು ದೇವಸ್ಥಾನಕ್ಕೆ ಮಣೆಗಾರನಾಗಿ ಸೇರಿದ ಮೇಲೆ ನನಗೆ ಮನವರಿಕೆಯಾಯಿತು” ಎಂದ ಅವರು, “ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಂಸ್ಕೃತ ವಿಭಾಗ ಅತ್ಯುತ್ತಮ ಕಾರ್ಯಕ್ರಮ ಆಯೋಜನೆ ಮಾಡಿದೆ” ಎಂದು ಶ್ಲಾಘಿಸಿದರು.
“ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಸ್ಕೃತಕ್ಕೆ ಇಂದು ಮಹತ್ವ ಪ್ರಾಪ್ತಿಯಾಗಿದೆ. ಭಾರತೀಯ ಬೃಹತ್ ಗ್ರಂಥಗಳ ಮೂಲ ಸಂಸ್ಕೃತ ಭಾಷೆಯಾಗಿದ್ದು, ದೇವರ ಭಾಷೆಯೂ ಆಗಿದೆ”
ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹೇಳಿದರು.
ವಿದ್ಯಾರ್ಥಿಗಳು ನೃತ್ಯ, ಗಾಯನ, ಯೋಗ, ನಾಟಕ, ನಾಟ್ಯ ಕಲೆಗಳ ‘ಸಂಸ್ಕೃತಸಂಧ್ಯಾ’ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಡಾ. ರಾಮಚಂದ್ರ ಪುರೋಹಿತ ಮತ್ತು ಇತರ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಿಂಚನ ವಂದಿಸಿ, ಮೇಘಾ ನಿರೂಪಿಸಿದರು.
ReplyForward |