ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : 8ನೇ ದಿನ ಅತಿರುದ್ರ ಮಹಾಯಾಗದ ಮುನ್ನೋಟ
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ‘ಅತಿರುದ್ರ ಮಹಾಯಾಗ’ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಏಳು ದಿನಗಳನ್ನು ಪೂರೈಸಿದೆ. ಈಗಾಗಲೇ ಹಲವು ಗಣ್ಯಾತಿ ಗಣ್ಯರು ಅತಿರುದ್ರ ಮಹಾಯಾಗಕ್ಕೆ ಆಗಮಿಸಿದ್ದಾರೆ ಮತ್ತು ಯಾಗದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅತಿರುದ್ರ ಮಹಾಯಾಗದಲ್ಲಿ ಭಾಗಿಯಾಗಲೆಂದೇ ದೂರದೂರಿನಿಂದ ಭಕ್ತಾದಿಗಳು ಆಗಮಿಸುತ್ತಿರುವುದು, ಯಾಗದ ಕಳೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಅತಿರುದ್ರ ಮಹಾಯಾಗದ ಎಂಟನೇ ದಿನವಾದ ಮಾರ್ಚ್ 01, 2023 ರ ಬುಧವಾರದಂದು, ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 07:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿವೆ. ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗ್ಗೆ 08:30 ರಿಂದ ಋತ್ವಿಜರಿಂದ ಸಪ್ತಶತೀ ಪಾರಾಯಣ, ಶ್ರೀ ಪುರುಷಸೂಕ್ತ ಹೋಮ ಮತ್ತು ಶತಚಂಡಿಕಾ ಯಾಗಮಂಟಪದಲ್ಲಿ ಸಾಯಂಕಾಲ 5 ರಿಂದ ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪ್ರಾಸಾದ ಶುದ್ಧಿ, ಕುಂಡ ಸಂಸ್ಕಾರ ಹೋಮ ನೆರವೇರಲಿವೆ.
ಇದರೊಂದಿಗೆ ಸಂಜೆ 5 ರಿಂದ ಪ್ರಖ್ಯಾತ ಪ್ರೇರಣಾದಾಯಿ ಮತ್ತು ಆಧ್ಯಾತ್ಮಿಕ ಪ್ರವಚನಕಾರರಾದ ರಾಜಯೋಗಿನಿ ಬಿ. ಕೆ. ವೀಣಾ, ಶಿರಸಿ ಅವರಿಂದ ಧಾರ್ಮಿಕ ಉಪನ್ಯಾಸ, ಸಂಜೆ 7 ರಿಂದ ವಿಶ್ವವಿಖ್ಯಾತ ಜಾದೂಗಾರರಾದ ಪ್ರೊ. ಶಂಕರ್ ಹಾಗೂ ಜೂ. ಶಂಕರ್ ಅವರಿಂದ “ಜಾಗೃತಿಗಾಗಿ ಜಾದೂ – ಆಧ್ಯಾತ್ಮಿಕ ಜಾದೂ ಪ್ರದರ್ಶನ” ಮತ್ತು ರಾತ್ರಿ 8 ರಿಂದ, ಗ್ಲೋ ಆರ್ಟ್ ಖ್ಯಾತಿಯ ಬೆಂಗಳೂರಿನ ಪ್ರಖ್ಯಾತ ಕಲಾವಿದ ವಿನಯ್ ಹೆಗಡೆ ಅವರಿಂದ “ಗಾಳಿಯಲ್ಲಿ ಚಿತ್ತಾರ” ಕಾರ್ಯಕ್ರಮಗಳು ನಡೆಯಲಿವೆ.
ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ಅತಿರುದ್ರ ಮಹಾಯಾಗ ಮಾರ್ಚ್ 05, 2023 ರವರೆಗೆ ನಡೆಯಲಿದೆ. 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ ನಿರಂತರವಾಗಿ ಯಾಗ ನಡೆಯಲಿವೆ.