ಶಿವಪಾಡಿಯಲ್ಲಿ ವಾರಣಾಸಿ ಪಂಡಿತರು : ಮಾರ್ಚ್ 4ರವರೆಗೆ ಗಂಗಾರತಿ ಮಾದರಿಯಲ್ಲಿ ಶಿವಾರತಿ
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ‘ಅತಿರುದ್ರ ಮಹಾಯಾಗ’ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಒಂಬತ್ತು ದಿನಗಳನ್ನು ಪೂರೈಸಿದ್ದು, ಇದೀಗ ಹತ್ತನೇಯ ದಿನಕ್ಕೆ ಪಾದಾರ್ಪಣೆ ಮಾಡಿದೆ. ಅಷ್ಟೋತ್ತರಸಹಸ್ರ ನಾಳಿಕೇರ ಗಣಯಾಗ, ಚಂಡಿಕಾ ಯಾಗಗಳಂತಹ ಅನೇಕ ಪೂಜಾ ಕಾರ್ಯಗಳೊಂದಿಗೆ ಅತಿರುದ್ರ ಮಹಾಯಾಗ ಯಶಸ್ವಿಯಾಗಿ ಪೂರ್ಣಗೊಳ್ಳುವ ಕಡೆ ಮುಖ ಮಾಡಿದೆ. ಮಾರ್ಚ್ 5, 2023 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ, ದಿನದಿಂದ ದಿನಕ್ಕೆ ಭಕ್ತರ ಆಗಮನ ಸಂಖ್ಯೆ ಹೆಚ್ಚುತ್ತಿದೆ.
ಅತಿರುದ್ರ ಮಹಾಯಾಗದಲ್ಲಿ ಭಕ್ತಿ ಭಾವವನ್ನು ಇನ್ನಷ್ಟು ಹೆಚ್ಚಿಸಲು, ಉತ್ತರಪ್ರದೇಶದ ವಾರಣಾಸಿಯ ಜಗತ್ಪ್ರಸಿದ್ಧ ವಿಶ್ವನಾಥ ದೇವಸ್ಥಾನದ “ಕಾಶಿ ವಿಶ್ವನಾಥ” ತಂಡದ ಪಂಡಿತರು ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಆಗಮಿಸಿ ಗಂಗಾರತಿ ಮಾದರಿಯಲ್ಲಿ “ಶಿವಾರತಿ” ಮಾಡಿದರು. ಈ ಸುಂದರವಾದ ದಿವ್ಯ ಆರತಿಯನ್ನು ವೀಕ್ಷಿಸಿದ ಜನರಲ್ಲಿ ಧನ್ಯತೆಯ ಭಾವ ಮೂಡಿತು. ಕಾಶಿ ವಿಶ್ವನಾಥನ ದರ್ಶನ ಮಾಡಿದಂತಾಯಿತು. ಉತ್ತರ ಭಾರತದಲ್ಲಿ ಪ್ರಸಿದ್ಧಿಯಾಗಿರುವ ಈ ಮಹಾರತಿಯನ್ನು, ಉಡುಪಿಯಲ್ಲಿ ಕಾಣುವ ಭಾಗ್ಯ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದಿಂದ ಸಾಧ್ಯವಾಗಿದೆ. “ಶಿವಾರತಿ”ಯು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 04 ರವರೆಗೆ, ಸಂಜೆ 7 ಗಂಟೆಗೆ ಜರುಗಲಿದೆ. ಅತೀ ಅಪರೂಪವಾದ ಅತಿರುದ್ರ ಮಹಾಯಾಗದಲ್ಲಿ, ಅಪರೂಪವಾದ “ಶಿವಾರತಿ” ಸೇವೆಯ ಸಂಗಮವನ್ನು ಶಿವಪಾಡಿಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.
ಮಹಾರತಿಯ ವಿಶೇಷತೆ :
ಅನಾದಿಕಾಲದಿಂದಲೂ ನಡೆಯುತ್ತಾ ಬಂದಿರುವ ಸುಂದರವಾದ, ಪರಶಿವನ ಪ್ರಿಯವಾದ ಸೇವೆಯಾಗಿದೆ. 1984 ರಲ್ಲಿ ಉತ್ತರಾಖಂಡದ ಗಂಗೋತ್ರಿಯಲ್ಲಿ ಪ್ರಾರಂಭಗೊಂಡ ಗಂಗಾ ಮಹಾರತಿ, ತದನಂತರ ಹೃಷಿಕೇಶ, ಹರಿದ್ವಾರ, ಕಾಶಿ, ಮುಂತಾದ ಕಡೆಯಲ್ಲಿ ಪ್ರಾರಂಭಗೊಂಡಿತು. ಈ ಅಮೋಘವಾದ ಮಹಾರತಿಯನ್ನು ಕಣ್ತುಂಬಿಕೊಳ್ಳಲು ಪ್ರಪಂಚದ ನಾನಾ ಕಡೆಗಳಿಂದ ಜನರು ಆಗಮಿಸುತ್ತಾರೆ. ಈ ಮಹಾರತಿಯಲ್ಲಿ, ಅಗರಬತ್ತಿಯ ಆರತಿ, ಧೂಪಾರತಿ, ದೀಪಾರತಿ, ಕರ್ಪೂರ ಆರತಿ ಮತ್ತು ಪುಷ್ಪಾರತಿ ಎಂಬ ಪ್ರಖಾರಗಳಿವೆ. ಮಹಾರತಿಯನ್ನು ವೀಕ್ಷಿಸಿದರೆ, ಮನಶಾಂತಿ ಹಾಗೂ ನೆಮ್ಮದಿ ಲಭ್ಯವಾಗುತ್ತದೆ. ಈ ಮಹಾರತಿ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿ ಹಾಗೂ ಪ್ರತಿಯೊಂದು ತೀರ್ಥಸ್ಥಳಗಳಲ್ಲಿ, ಯಜ್ಞ ಅನುಷ್ಠಾನಗಳಲ್ಲಿ ತನ್ನ ಶೋಭೆಯನ್ನು ಹರಡಿದೆ.