ಶುಭಂ ನುಡಿದ ಮಹಾಯಜ್ಞ : ಶಿವಪಾಡಿಯ ಅತಿರುದ್ರ ಮಹಾಯಾಗದ ಮಿಂಚು ನೋಟ
ವಾದ್ಯ, ಚೆಂಡೆಗಳ ಘೋಷದೊಂದಿಗೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದವರೆಗೆ ಮಾರ್ಚ್ 04, 2023 ರಂದು ಭವ್ಯ ಮೆರವಣಿಗೆಯ ಮೂಲಕ ಶೃಂಗೇರಿ ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರನ್ನು ಆದರದಿಂದ ಬರಮಾಡಿಕೊಳ್ಳಲಾಯಿತು.
ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗದ, ಸಮಾಪ್ತಿಯ ದಿನ ಮಾರ್ಚ್ 05, 2023 ರ ಭಾನುವಾರದಂದು ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ ಜಗದ್ಗುರುಗಳ ಸಾನಿಧ್ಯದಲ್ಲಿ ಪೂರ್ಣಾಹುತಿ, ಮಧ್ಯಾಹ್ನ ಜಗದ್ಗುರುಗಳಿಂದ ಶ್ರೀ ದೇವರಿಗೆ ಕಲಶಾಭಿಷೇಕ, ಪ್ರಸನ್ನಪೂಜೆ, ಮಹಾಪೂಜೆ, ಫಲಮಂತ್ರಾಕ್ಷತೆ. ನಂತರ ಪಲ್ಲಪೂಜೆ, ಮಹಾಸಂತರ್ಪಣೆ ನೆರವೇರಿತು. ಅತಿರುದ್ರ ಮಹಾಯಾಗದ ಈ ಅಂತಿಮ ಪೂಜಾ ಕಾರ್ಯಗಳಲ್ಲಿ ಗಣ್ಯಾತಿಗಣ್ಯರು ಪಾಲ್ಗೊಂಡರು.
ಸಕಲ ಪೂಜಾ ಕಾರ್ಯಗಳು ನೆರವೇರಿ, ಯಜ್ಞ ಪೂರ್ಣರೂಪ ಪಡೆದ ನಂತರ, ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆ ಮತ್ತು ಪ್ರೊ ಪವನ್ ಕಿರಣ್ ಕೆರೆ ವಿರಚಿತ ಸುಶಾಸನ ಸಮಿತಿ ಪ್ರಸ್ತುತಿಯಲ್ಲಿ “ಕಾಶ್ಮೀರ ವಿಜಯ” ತಾಳಮದ್ದಲೆ ಹಾಗೂ ರಾತ್ರಿ ಅಜಯ್ ವಾರಿಯರ್ ಮತ್ತು ಮನೋಜಮ್ ಅವರಿಂದ “ಭಕ್ತಿ ಸಂಗೀತ ರಸಮಂಜರಿ” ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಅತಿರುದ್ರ ಮಹಾಯಾಗದ ಮಹಾಸಂಕಲ್ಪ ಸುದೀರ್ಘ 12 ದಿನಗಳ ಕಾಲ ನಡೆದು ಅತ್ಯಂತ ಯಶಸ್ವಿಯಾಗಿ ಇಂದು ಸಮಾಪ್ತಿಗೊಂಡಿತು.