ದಂತಾಘಾತವಾದಾಗ ಏನು ಮಾಡಬೇಕು?

ಹಲ್ಲು ನಮ್ಮ ದೇಹದ ಅತ್ಯಂತ ಪ್ರಾಮುಖ್ಯವಾದ ಅಂಗ. ಸುಂದರ ದಂತ ಪಂಕ್ತಿಗಳಿಂದ ಕೂಡಿದ ನಗು ಎಂತವರನ್ನು ಮಂತ್ರ ಮುಗ್ಧವಾಗಿಸುತ್ತದೆ. ಹಲ್ಲು ನಮ್ಮ ದೇಹದ ಮುಂಭಾಗದಲ್ಲಿ ಇರುವ ಕಾರಣದಿಂದಲೇ ಯಾವುದೇ ಆಟೋಟಗಳಲ್ಲಿ, ಹೊಡೆದಾಟದಲ್ಲಿ, ಅಪಘಾತದಲ್ಲಿ ಬಿದ್ದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಇದು ಸರ್ವೆ ಸಾಮಾನ್ಯವಾಗಿರುತ್ತದೆ. ಹೀಗೆ ತಮಗರಿಯುವ ಮುನ್ನವೇ ಹಲ್ಲು ತುಂಡಾದಾಗ ಮತ್ತು ಹಲ್ಲು ಹಲ್ಲಿನ ಸಾಕೆಟ್‍ನಿಂದ ಹೊರಬಿದ್ದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ಹೆಚ್ಚಿನ ಜನರಿಗೆ ಅರಿವು ಇರುವುದಿಲ್ಲ. ಹಲ್ಲು ಪೂರ್ತಿಯಾಗಿ ಹೊರಬಂದಿದಲ್ಲಿ ಕೆಲವೊಂದು ಸರಳ ಪ್ರಯತ್ನಗಳಿಂದ ಹಲ್ಲನ್ನು ಪುನ: ಜೋಡಿಸಿ ಮೊದಲಿನಂತೆ ಮಾಡಲು ಸಾಧ್ಯವಿದೆ.

ಶಾಶ್ವತ ಹಲ್ಲು ಆಕಸ್ಮಿಕವಾಗಿ ಹೊರ ಬಂದಾಗ ಏನು ಮಾಡಬಾರದು?

  1. ಹಲ್ಲಿನ ಬೇರಿನ ಭಾಗವನ್ನು ಯಾವುದೇ ಕಾರಣಕ್ಕೂ ಮುಟ್ಟಬೇಡಿ. ಹಲ್ಲನ್ನು ಹಲ್ಲಿನ ಕಿರೀಟದ ಭಾಗದಲ್ಲಿ ಅಥವಾ ಕ್ರೌನ್‍ನ ಭಾಗದಲ್ಲಿ ಮಾತ್ರ ಮುಟ್ಟತಕ್ಕದ್ದು.
  2. ಹಲ್ಲಿನ ಬೇರಿನ ಭಾಗವನ್ನು ಯಾವುದೇ ಕಾರಣಕ್ಕೂ ಉಜ್ಜಬೇಡಿ ಅಥವಾ ಮಣ್ಣು ಧೂಳು ತೆಗೆಯುವ ಪ್ರಯತ್ನ ಮಾಡಬೇಡಿ.
  3. ಬಿದ್ದ ಹಲ್ಲನ್ನು ಯಾವುದೇ ಕಾರಣಕ್ಕೂ ಬ್ರಶ್‍ನಿಂದ ತೊಳೆಯಬೇಡಿ.
  4. ಬಿದ್ದ ಹಲ್ಲನ್ನು ಯಾವುದೇ ಕಾರಣಕ್ಕೂ ಆಲ್ಕೊಹಾಲ್, ಸ್ಪಿರೀಟ್ ಅಥವಾ ಇನ್ನಾವುದೇ ಆಂಟಿ ಸೆಪ್ಟಿಕ್ ದ್ರಾವಣದಿಂದ ತೊಳೆಯಬೇಡಿ.
  5. ಯಾವುದೇ ಕಾರಣಕ್ಕೂ ಬಿದ್ದ ಹಲ್ಲು ಒಣಗದಂತೆ ನೋಡಿಕೊಳ್ಳಬೇಕು.
  6. ಹಲ್ಲು ಬಾಯಿಯ ಒಳಗೆ ಸಾಕೆಟ್‍ನಿಂದ ಹೊರಗಿದ್ದಲ್ಲಿ ಯಾವುದೇ ಕಾರಣಕ್ಕೂ ಬಾಯಿಯಿಂದ ತೆಗೆಯುವ ಪ್ರಯತ್ನ ಮಾಡಬೇಡಿ.

ಏನು ಮಾಡಬೇಕು?

  1. ಬಿದ್ದ ಹಲ್ಲನ್ನು ಹುಡುಕಬೇಕು. ಯಾವುದೇ ಕಾರಣಕ್ಕೂ ಬಿದ್ದು ಹೋದ ಹಲ್ಲು ಉಪಯೋಗವಿಲ್ಲ ಎಂದು ಅಪಘಾತವಾದ ಜಾಗದಲ್ಲಿ ಬಿಟ್ಟು ಬರಬೇಡಿ.
  2. ಬಿದ್ದ ಹಲ್ಲನ್ನು ಅದರ ಕಿರೀಟದ ಭಾಗದಿಂದ ಮಾತ್ರ ಸ್ಪರ್ಶಿಸಬೇಕು. ಬೇರಿನ ಭಾಗದಿಂದ ಮುಟ್ಟಬೇಡಿ.
  3. ಬಿದ್ದ ಹಲ್ಲನ್ನು ನೇರವಾಗಿ ಬಿದ್ದ ಜಾಗದಲ್ಲಿ ಇಡಲು ಯತ್ನಿಸಬೇಕು. ಸಾಧ್ಯವಾಗದಿದ್ದಲ್ಲಿ ಬಾಯಿಯ ಒಳಗೆ ನಾಲಿಗೆ ಕೆಳಭಾಗದಲ್ಲಿ ಇಟ್ಟುಬಿಡಿ. ನುಂಗಿ ಹೋಗದಂತೆ ಎಚ್ಚರ ವಹಿಸಿ.
  4. ಬಾಯಿಯಲ್ಲಿ ರಕ್ತಸ್ರಾವ ವಾಗಿ ಹಲ್ಲು ಕೊಳಕಾಗಿದ್ದಲ್ಲಿ, ಬಾಯಿಯೊಳಗೆ ಇಡಲು ಆಗದಿದ್ದಲ್ಲಿ ಒಂದು ಗ್ಲಾಸ್ ಹಾಲು ಅಥವಾ ಉಪ್ಪಿನ ದ್ರಾವಣ(ಸಲೈನ್ ದ್ರಾವಣ)ದಲ್ಲಿ ಮುಳುಗಿಸಿ ಇಡತಕ್ಕದ್ದು.
  5. ಒಂದು ಕ್ಷಣವೂ ತಡಮಾಡದೆ ತಕ್ಷಣವೇ ದಂತ ವೈದ್ಯರ ಬಳಿ ದೌಡಾಯಿಸಬೇಕು.
  6. ಹಲ್ಲು ಬಹಳ ಕೊಳಾಕಾಗಿದ್ದಲ್ಲಿ ಕೇವಲ ಹರಿಯುವ ಶುದ್ದ ನೀರು ಅಥವಾ ಸಲೈನ್ ದ್ರಾವಣದಲ್ಲಿ ತೊಳೆಯತಕ್ಕದ್ದು. ಆದರೆ ಬೇರಿನ ಭಾಗವನ್ನು ಸ್ಪರ್ಶಿಸಬಾರದು. ಬೇರಿನ ಭಾಗವನ್ನು ಸ್ಪರ್ಶಿಸಿದರೆ ಅಥವಾ ಉಜ್ಜಿದರೆ ಅಥವಾ ಬ್ರಶ್ ಮಾಡಿದರೆ ಬೇರಿನ ಸುತ್ತ ಇರುವ ಅಂಗಾಂಶಗಳಿಗೆ ಹಾನಿಯಾಗಿ ಹಲ್ಲು ಪುನ: ಮರು ಜೋಡಣೆ ಮಾಡಲು ಅಡ್ಡಿಯಾಗಬಹುದು.
  7. ಹಲ್ಲು ಬಿದ್ದ ಬಳಿಕ ಒಂದು ಘಂಟೆ ಸಮಯ ಅತೀ ಅಮೂಲ್ಯವಾಗಿರುತ್ತದೆ. ಇದನ್ನು ಗೋಲ್ಡನ್ ಅವರ್ ಎನ್ನುತ್ತಾರೆ. ಸಮಯ ವ್ಯರ್ಥವಾದಷ್ಟು ಹಲ್ಲಿನ ಉಳಿವಿಕೆಯ ಸಾಧ್ಯತೆ ಕಡಿಮೆಯಾಗುತ್ತದೆ.
  8. ಬಿದ್ದು ಹಲ್ಲಿನ ಜೀವಂತಿಕೆಯನ್ನು ಉಳಿಸಲು ಅತಿ ಸುಲಭ ಮತ್ತು ಸರಳ ದ್ರಾವಣ ಎಂದರೆ ಅದೇ ವ್ಯಕ್ತಿಯ ಎಂಜಲು. ಬಿದ್ದ ಹಲ್ಲನ್ನು ಶುದ್ದ ನೀರಿನಲ್ಲಿ ಶುಚಿಗೊಳಿಸಿ ಪುನ: ಬಾಯಿಯೊಳಗೆ ನಾಲಿಗೆಯ ತುಳು ಭಾಗದಲ್ಲಿ ಇಟ್ಟು ದಂತವೈದ್ಯರ ಬಳಿ ತಕ್ಷಣವೇ ಹೋಗತಕ್ಕದ್ದು.

ದಂತಾಘಾತವನ್ನು ತಡೆಯುವುದು ಹೇಗೆ?

  1. ಕುಸ್ತಿ, ಮಲ್ಲಯುದ್ಧ, ಕಬ್ಬಡ್ಡಿ ಅಥವಾ ಇನ್ನಾವುದೇ ಕೈ ಕೈ ಮಿಲಾಯಿಸುವ ಆಟಗಳಲ್ಲಿ ಮೌತ್‍ಗಾರ್ಡ್ ಎಂಬ ಹಲ್ಲನ್ನು ರಕ್ಷಿಸುವ ಸಾಧನವನ್ನು ಬಳಸಬೇಕು.
  2. ವಾಹನಗಳಲ್ಲಿ ಓಡಾಡುವಾಗ ಯಾವಾತ್ತೂ ಸೀಟ್‍ಬೆಲ್ಟ್ ಧರಿಸತಕ್ಕದ್ದು. ಅತೀ ಹೆಚ್ಚು ಹಲ್ಲಿಗೆ ಆಘಾತವಾಗಲು ಕಾರಣವೆಂದರೆ ವಾಹನ ಅಫಘಾತವಾಗಿರುತ್ತದೆ.
  3. ಸಾಧ್ಯವಾದಷ್ಟು ಜಗಳವಾದಾಗ ಕೈ ಕೈ ಮಿಲಾಯಿಸುವುದನ್ನು ತಪ್ಪಿಸಿ.
  4. ಗಟ್ಟಿಯಾದ ಆಹಾರ ಪದಾರ್ಥಗಳಾದ ಎಲುಬು ಇರುವ ಮಾಂಸ ಅಥವಾ ಇನ್ನಾವುದೋ ಗಟ್ಟಿ ಪದಾರ್ಥ ತಿನ್ನುವಾಗ ಮುಂಭಾಗದ ಹಲ್ಲಿನ ಬಗ್ಗೆ ಎಚ್ಚರ ವಹಿಸಿ.
  5. ಹಲ್ಲು ನಮ್ಮ ಮುಖಕ್ಕೆ ಅಂದ ನೀಡಲು ಮತ್ತು ಜಗಿಯಲು ಬಹಳ ಅವಶ್ಯಕ. ಮುಂಭಾಗದ ಹಲ್ಲು ಹೆಚ್ಚಾಗಿ ಮುಖಕ್ಕೆ ಅಂದ ನೀಡುವ ಕಾರ್ಯ ಮಾಡುತ್ತದೆ. ಇಂತಹ ಮುಂಭಾಗದ ಹಲ್ಲುಗಳಿಂದ ಪೆಪ್ಸಿ ಬಾಟಲ್ ಅಥವಾ ಬೀರ್ ಬಾಟಲು ಓಪನ್ ಮಾಡುವ ದುಸ್ಸಾಹಸ ಬೇಡ.
  6. ಅದೇ ರೀತಿ ಹಲ್ಲುಗಳಿಂದ ಕಾರು, ಬಸ್ಸು ಎಳೆದು ದಾಖಲೆ ಮಾಡುವುದು, ತೆಂಗಿನ ಕಾಯಿ ಸುಲಿಯುವುದು ಮುಂತಾದ ಮುರ್ಖತನದ ಕೆಲಸ ಯಾವತ್ತೂ ಮಾಡಬೇಡಿ.

ಕೊನೆಮಾತು

ಹಲ್ಲು ನಮ್ಮ ದೇಹದ ಅತ್ಯಂತ ಅನಿವಾರ್ಯವಾದ ಅಂಗವಾಗಿದೆ. ಹಾಲು ಹಲ್ಲು ಅಫಘಾತದಿಂದ ಬಿದ್ದು ಹೋದಲ್ಲಿ ಜಾಸ್ತಿ ತಲೆಗೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಶಾಶ್ವತ ಹಲ್ಲುಗಳು ಬಿದ್ದು ಹೋದಲ್ಲಿ ತಕ್ಷಣವೇ ದಂತ ವೈದ್ಯರ ಬಳಿ ಹೋಗಿ ಸರಿಪಡಿಸಿಕೊಳ್ಳತಕ್ಕದ್ದು. ಕೆಲವೊಮ್ಮೆ ಶಾಶ್ವತ ಹಲ್ಲು ಹೊರಗೆ ಬರದಿದ್ದರೂ ಬಾಯಿಯೊಳಗೆ ಅಲ್ಲಾಡುತ್ತಿದ್ದರೆ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಿಕೊಳ್ಳತಕ್ಕದ್ದು. ಏಟಿನಿಂದ ಗಾಯವಾಗಿ ಅಲುಗಾಡುತ್ತಿರುವ ಶಾಶ್ವತ ಹಲ್ಲು ಸತ್ತು ಹೋಗಿ ಬಣ್ಣ ಬದಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಫಘಾತದಿಂದ ಶಾಶ್ವತ ಹಲ್ಲು ಬಿದ್ದಾಗ ನಿರ್ಲಕ್ಷ ವಹಿಸಿ ಬಿದ್ದು ಹೋದ ಹಲ್ಲು ಉಪಯೋಗವಿಲ್ಲ ಎಂದು ಯಾವತ್ತೂ ಮೂಗು ಮುರಿಯಬೇಡಿ. ನಿಮ್ಮ ಶಾಶ್ವತ ಹಲ್ಲು ವಜ್ರಕ್ಕಿಂತಲೂ ಅತ್ಯಮೂಲ್ಯ ಎಂಬ ಸತ್ಯವನ್ನು ಎಂದಿಗೂ ಮರೆಯದಿರಿ. ಅಪಘಾತವಾದೊಡನೆ ಹಲ್ಲಿನ ಸಮೇತ ದಂತವೈದ್ಯರ ಬಳಿ ಹೋಗಿ ನಿಮ್ಮ ಮೊದಲಿನ ನಗುವನ್ನು ಮರಳಿ ಪಡೆಯುದರಲ್ಲಿಯೇ ನಿಮ್ಮ ಜಾಣತನ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು
BDS MDS DNB MBA FPFA MOSRCSEd
Consultant Oral and Maxillofacial Surgeon
www.surakshadental.com

Related Posts

Leave a Reply

Your email address will not be published.