ಉಡುಪಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವಕ: ವಾರಗಳ ಬಳಿಕ ನಾಯಿಯ ಸಹಾಯದಿಂದ ಮರಳಿ ಮನೆಗೆ
ಮನೆಯಿಂದ ಹೊರಗೆ ತೆರಳಿದ ಯುವಕನೋರ್ವ ವಾರಗಳ ಬಳಿಕ ನಾಯಿಯ ಸಹಾಯದಿಂದ ಮನೆಗೆ ಮರಳಿದ ಘಟನೆ ಉಡುಪಿಯ ಅಮವಾಸೆ ಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಮಟ್ಟಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಶೀನ ನಾಯ್ಕ ಅವರ ಮಗ ವಿವೇಕಾನಂದ (28) ನಾಪತ್ತೆಯಾಗಿದ್ದ ಯುವಕ. ವಿವೇಕಾನಂದ ಸೆಪ್ಟೆಂಬರ್ 16 ರಂದು ಮನೆಯಿಂದಲೇ ನಾಪತ್ತೆಯಾಗಿದ್ದ. ಮನೆಯಿಂದ ಹೊರಡುವಾಗ ಮನೆಯ ನಾಯಿ ಕೂಡು ವಿವೇಕಾನಂದ ಅವರ ಜೊತೆ ತೆರಳಿತ್ತು. ವಾರಗಳ ಕಾಲ ಕಾಡಿನಲ್ಲಿ ಅಲೆದಾಡಿದ್ದ ವಿವೇಕಾನಂದ ಅನ್ನ ಆಹಾರವಿಲ್ಲದೆ ಬರಿ ನೀರು ಕುಡಿದು ಜೀವಂತವಿದ್ದ.
ಈತನನ್ನು ಹುಡುಕುವ ಸಲುವಾಗಿ ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಸಾಕಷ್ಟು ಶೋಧ ನಡೆಸಿತ್ತು. ಈ ಭಾಗದಲ್ಲಿ ಚಿರತೆಗಳ ಕಾಟ ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಚಿರತೆಗೆ ಆಹಾರವಾಗಿರಬಹುದು ಎನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ 8 ದಿನಗಳ ಬಳಿಕ ಕಬ್ಬಿನಾಲೆಯ ಸಮೀಪದ ಮನೆ ಒಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮನೆಯ ನಾಯಿಯ ಸಹಾಯದಿಂದ ಊರಿಗೆ ಮರಳಿದ್ದ ವಿವೇಕಾನಂದ ನಿತ್ರಾಣಗೊಂಡಿರುವ ಹಿನ್ನಲೆಯಲ್ಲಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.