ಉಡುಪಿ: ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟಿಸುವ ಪರಿಸ್ಥಿತಿ ಸೃಷ್ಠಿ ಮಾಡಬೇಡಿ: ಕೋಟ ಶ್ರೀನಿವಾಸ ಪೂಜಾರಿ
ಕರ್ನಾಟಕದ ಎಲ್ಲಾ ವಿರೋಧ ಪಕ್ಷದ ಶಾಸಕರಿಗೆ ಅನ್ವಯಿಸುವ ಸಮಸ್ಯೆ ಇದು. ವಿರೋಧಪಕ್ಷದ ಶಾಸಕರನ್ನ ಸಿದ್ದರಾಮಯ್ಯ ಸರ್ಕಾರ ಹಣೆಯಲು ಹೊರಟಿದೆ. ಹಿಂದಿನ ಸರ್ಕಾರದ ಎಲ್ಲಾ ಯೋಜನೆಯನ್ನು ಈ ಸರ್ಕಾರ ತಡೆ ಹಿಡಿದಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಉಡುಪಿಯಲ್ಲಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಶಾಸಕ ಮುನಿರತ್ನ ಪ್ರತಿಭಟನೆ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಮಂಜೂರಾದ ಯೋಜನೆಯ ಹಣವನ್ನು ಬಿಡುಗಡೆ ಮಾಡದೆ ತಡೆಹಿಡಿಯಲಾಗಿದೆ. ಹೊಸ ಯೋಜನೆ ಮಂಜೂರು ಮಾಡಿ ಎಂದು ಮುನಿರತ್ನ ವಾದಿಸುತ್ತಿಲ್ಲ. ಹಿಂದುಳಿದ ವರ್ಗ ಸಮಾಜ ಕಲ್ಯಾಣ ಶಿಕ್ಷಣ ಇಲಾಖೆ ಎಲ್ಲಾ ಯೋಜನೆಯನ್ನು ತಡೆಹಿಡಿದಿದೆ.
ಶಾಸಕರು ಸರಕಾರದ ಭಾಗ ಎಂಬುದನ್ನು ಮರೆಯಬೇಡಿ. ನಮ್ಮ ಸರ್ಕಾರ ಇರುವಾಗ ಬೊಮ್ಮಾಯಿ ಎಲ್ಲರಿಗೂ ಅನುದಾನ ಕೊಟ್ಟಿದ್ದಾರೆ. ಅನುದಾನ ತಡೆ ಹಿಡಿಯುವುದನ್ನು ಕೂಡಲೇ ನಿಲ್ಲಿಸಬೇಕು. ಭಾಗ್ಯಗಳನ್ನು ಕೊಡುವುದು ಬಿಡುವುದು ಸರಕಾರಕ್ಕೆ ಸಂಬಂಧಪಟ್ಟದ್ದು, ಹಿಂದಿನ ಸರ್ಕಾರ ಮಂಜೂರು ಮಾಡಿದ ಹಣ ಬಿಡುಗಡೆ ಮಾಡಿ, ಟೆಂಡರ್ ಆದ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ.
ಮುನಿರತ್ನ ಮಾಡುವ ಹೋರಾಟಕ್ಕೆ ನಾವೆಲ್ಲ ಬೆಂಬಲಿಸುತ್ತಿದ್ದೇವೆ. ಎಲ್ಲರೂ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸುವ ಪರಿಸ್ಥಿತಿ ಸೃಷ್ಟಿ ಮಾಡಬೇಡಿ ಎಂದು ಕೋಟ ಶ್ರೀನಿವಾಸ ಪೂಜಾರಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.