ಖಾವಿಧಾರಿಗಳಿಂದ ಜಾತ್ರೆಗಾಗಿ ಕಲೆಕ್ಷನ್ : ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಉಳ್ಳಾಲ: ಜಾತ್ರೆಗೆ ಸಹಾಯಹಸ್ತ ಬೇಕು ಎಂದು ಭಿಕ್ಷಾಟನೆಯಲ್ಲಿ ತೊಡಗಿದ್ದ ಯುವಕನನ್ನು ತೊಕ್ಕೊಟ್ಟುವಿನ ಕ್ಯಾಟರಿಂಗ್ ಸಂಸ್ಥೆ ಮಾಲೀಕ ರಾಜೇಶ್ ಎಂಬವರು ಸಂಶಯದ ಮೇರೆಗೆ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ತೊಕ್ಕೊಟ್ಟು ಕಾಪಿಕಾಡು ರಾಜ್ ಕೇಟರಸ್ ಬಳಿ ಬಂದಿದ್ದ ಖಾವಿ ತೊಟ್ಟ ಯುವಕ ಜಾತ್ರೆ ನಡೆಸಲು ದಾನ ನಡೆಸಬೇಕು ಎಂದು ಮಾಲೀಕ ರಾಜೇಶ್ ಎಂಬವರಲ್ಲಿ ಕೇಳಿದ್ದನು. ಸಂಸ್ಥೆ ಮಾಲೀಕರು ರಾತ್ರಿ ವೇಳೆ ಜಾತ್ರೆಗಾಗಿ ಹಣ ಕೇಳುವುದನ್ನು ಸಂಶಯ ವ್ಯಕ್ತಪಡಿಸಿ ವಿಚಾರಣೆ ನಡೆಸಿದ್ದಾರೆ.
ಆದರೆ ಯುವಕ ಸಮರ್ಪಕವಾಗಿ ಉತ್ತರ ನೀಡದೆ, ಮುತ್ತಪ್ಪ, ಹೈದರಾಬಾದ್ ಮೂಲದವನೆಂದು ಮೊದಲಿಗೆ ಹೇಳಿದ್ದಾನೆ. ಅಲ್ಲದೆ 30 ಜನ ನಗರದಲ್ಲಿ ಇದೇ ರೀತಿ ಕಲೆಕ್ಷನ್ ಮಾಡುತ್ತಿರುವುದಾಗಿ ಕನ್ನಡ ಭಾಷೆಯಲ್ಲಿ ಹೇಳಿದ್ದಾನೆ. ಯುವಕನ ಬಳಿ ಮೊಬೈಲ್ ಆಗಲಿ, ಯಾವುದೇ ಗುರುತಿನ ಚೀಟಿ ಇಲ್ಲದಿರುವುದನ್ನು ಗಮನಿಸಿದ ಸಂಸ್ಥೆ ಮಾಲೀಕ ರಾಜೇಶ್ ಅವರು ಸ್ಥಳಕ್ಕೆ ಉಳ್ಳಾಲ ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಯುವಕ ತಾನು ಜಮಖಂಡಿ ಜಿಲ್ಲೆಯವನೆಂದು ಧ್ವಂದ್ವ ಹೇಳಿಕೆಯನ್ನು ನೀಡಿದ್ದಾನೆಂದು ತಿಳಿದುಬಂದಿದೆ.
