ಉಳ್ಳಾಲ: ಬೆಳ್ಮ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ

ಉಳ್ಳಾಲ: ಬೆಳ್ಮ ಗ್ರಾಮ ಪಂಚಾಯಿತಿ ವರ್ಷದಲ್ಲಿ ಸಾಧಿಸಿದ ಜೀವನ ಗುಣಮಟ್ಟ, ಸ್ವಂತ ಸಂಪನ್ಮೂಲ ಕ್ರೋಢೀಕರಣ, ಮೂಲ ಸೌಕರ್ಯಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಆಡಳಿತ, ಸೇವಾ ಪೂರೈಕೆ ಮತ್ತು ನಾವೀನ್ಯತೆ ಯೋಜನೆಗಳ ಸಹಿತ ಸರಕಾರದ 138 ಪ್ರಶ್ನೆಗಳಿಗೆ ಯಶಸ್ವಿಯಾಗಿ ಪ್ರತಿಕ್ರಿಯಿಸಿದ ಫಲವಾಗಿ 2022-23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಉಳ್ಳಾಲ ತಾಲೂಕಿನಿಂದ ಬೆಳ್ಮ ಗ್ರಾ.ಪಂ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದುಕೊಂಡಿದೆ.

2002ರಲ್ಲಿ ಬಯಲು ಬಹಿರ್ದೆಸೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ ರಾಜ್ಯಮಟ್ಟದಲ್ಲಿ ಪಡೆದ ಪ್ರಥಮ ಪುರಸ್ಕಾರವಾಗಿದ್ದು, ಇದೀಗ ಅದೇ ಗ್ರಾ.ಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಸ್ವಯಂಪ್ರೇರಿತ ಸಮಗ್ರ ಸಾಮಾಜಿಕ ಆರ್ಥಿಕ ಸಮೀಕ್ಷೆ, ಯಶಸ್ವಿ ಸಂಪೂರ್ಣ ಸ್ವಚ್ಛತಾ ಆಂದೋಲನ, ಜನತಾ ಜೀವ ವೈವಿಧ್ಯ ದಾಖಲಾತಿ ಮತ್ತು ಪ್ರಕಟಣೆ, ಕುಡಿಯುವ ನೀರು ಪೂರೈಕೆ ಯೋಜನೆ, ಕೇಂದ್ರೀಕೃತ ಸೋಲಾರ್ ಬೀದಿದೀಪ, ದಾನಿಯಿಂದ ಪಂಚಾಯತ್ ಸೌಧ ನಿರ್ಮಾಣ,

ಸುವರ್ಣ ಗ್ರಾಮೋದಯ ಯೋಜನೆ ಮೂಲಕ ಗ್ರಾಮದ ಮೂಲ ಸೌಲಭ್ಯ ವೃದ್ಧಿ, ಆರ್ಥಿಕ ಶಿಸ್ತು ಪಾಲನೆ, ವಸತಿ ಸಭೆ, ವಾರ್ಡ್ಸಭೆ, ಗ್ರಾಮಸಭೆ, ಮಹಿಳಾ ಗ್ರಾಮಸಭೆ, ಮಕ್ಕಳ ಗ್ರಾಮಸಭೆ, ದಲಿತ ಗ್ರಾಮಸಭೆಗಳ ಮೂಲಕ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಎಲ್ಲರನ್ನು ಒಳಗೊಳ್ಳುವುದರ ಜತೆಗೆ ಪಾರದರ್ಶಕತೆ, ಉತ್ತರದಾಯಿತ್ವ, ಸಾಮಾಜಿಕ ನ್ಯಾಯ ಪಾಲನೆಯಲ್ಲಿ ಅದರದು ಉನ್ನತ ಮಟ್ಟದ ಸಾಧನೆ. ಸಂಪನ್ಮೂಲ ಕ್ರೋಢೀಕರಣ, ಬೀದಿದೀಪ ಅಳವಡಿಕೆ ಮತ್ತು ನಿರ್ವಹಣೆ, ಉದ್ಯೋಗ ಖಾತರಿ ಯೋಜನೆ ಅನುಷ್ಠಾನ, ನಾವೀನ್ಯತಾ ಕಾರ್ಯಕ್ರಮಗಳಲ್ಲೂ ಗಮನಾರ್ಹ ಸಾಧನೆ ಮಾಡಿರುವುದನ್ನು ಈ ಪ್ರಶಸ್ತಿ ಗುರುತಿಸಿದೆ.

ಶಾಸಕರ ಅನುದಾನ, ಪಂ.ನ ಸದಸ್ಯರೆಲ್ಲರ ಒಗ್ಗಟ್ಟು, ಸಿಬ್ಬಂದಿ ಹಾಗೂ ಅಭಿವೃದ್ಧಿ ಅಧಿಕಾರಿಗಳ ಕಾರ್ಯದಿಂದ ಬೆಳ್ಮ ಪುರಸ್ಕಾರ ಪಡೆಯಲು ಅರ್ಹವಾಗಿದೆ ಎಂದು ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ತಿಳಿಸಿದ್ದಾರೆ. ಸರಕಾರ ಕೇಳಿದ 138 ಪ್ರಶ್ನೆಗಳಲ್ಲೂ ಬೆಳ್ಮ ಗ್ರಾಮ ಅಭಿವೃದ್ಧಿಯನ್ನು ನಡೆಸಿದೆ. ಅದಕ್ಕಾಗಿ ಶ್ರಮಿಸಿದ ಊರಿನ ಗ್ರಾಮಸ್ಥರು, ಸಿಬ್ಬಂದಿ, ಅಧಿಕಾರಿಗಳ ಕಾರ್ಯವೈಖರಿಯಿಂದ ಎಲ್ಲವೂ ಸಾಧ್ಯವಾಗಿದೆ. ಎಂದು ಅಭಿವೃದ್ಧಿ ಅಧಿಕಾರಿ ರಮೇಶ್ ನಾಯ್ಕ್ ಹೇಳಿದ್ದಾರೆ.

ತಮ್ಮ ಗ್ರಾಮ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದರ ಹಿನ್ನೆಲೆಯಲ್ಲಿ ಬೆಳ್ಮ ಗ್ರಾ.ಪಂ ಅಧ್ಯಕ್ಷೆ ರಝಿಯಾ, ಮಾಜಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ , ಪಂ. ಸದಸ್ಯರುಗಳಾದ ಅಬ್ದುಲ್ ರಝಾಕ್, ಇಕ್ಬಾಲ್ ಹೆಚ್. ಆರ್, ಪುಷ್ಪಾ ಕಾನೆಕೆರೆ ಕಾರ್ಯದರ್ಶಿ ವಾಣಿಶ್ರೀ, ಎಫ್ ಡಿಎ ರಾಜೀವ್ ಡಿ, ಸಿಬ್ಬಂದಿಗಳಾದ ಮಹಮ್ಮದ್ ಕಮಲ್, ಶಿಹಾಬುದ್ಧೀನ್.ಟಿ, ನಿತಿನ್ ಸರಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Related Posts

Leave a Reply

Your email address will not be published.