ಕಡಿಮೆ ಅಂಕ ನೀಡಿದಕ್ಕಾಗಿ, ಶಿಕ್ಷಕಿಯ ವಾಟರ್ ಬಾಟಲ್‍ಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು…!!

ಸಾಂದರ್ಭಿಕ ಚಿತ್ರ

ಉಳ್ಳಾಲ : ಶಾಲಾ ಪರೀಕ್ಷೆಯ ಗಣಿತ ವಿಷಯದಲ್ಲಿ ಕಡಿಮೆ ಅಂಕ ಹಾಗೂ ಒಂದು ಮಾರ್ಕ್ ಕಡಿಮೆ ನೀಡಿದರೆಂಬ ದ್ವೇಷಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಗಣಿತ ಶಿಕ್ಷಕಿಯ ವಾಟರ್ ಬಾಟಲಿಗೆ ಎಕ್ಸ್ಪೈರಿ ಆದ ಮಾತ್ರೆ ಹಾಕಿದ ಪರಿಣಾಮ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡ ಘಟನೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ಘಟನೆ ಸಂಬಂಧ ಇಂದು ಶಾಲೆಯಲ್ಲಿ ತುರ್ತು ಎಸ್‍ಡಿಎಂಸಿ ಸಭೆ ನಡೆಸಿ ವಿದ್ಯಾರ್ಥಿನಿಯರಿಬ್ಬರಿಗೆ ಟಿ.ಸಿ ನೀಡಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಶಾಲಾ ಯುನಿಟ್ ಟೆಸ್ಟ್ ನ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಅಲ್ಲದೇ ಸರಿಯಿದ್ದ ಉತ್ತರಕ್ಕೆ ಶಿಕ್ಷಕಿ ತಪ್ಪು ಹಾಕಿದ್ದಾರೆ ಅನ್ನುವ ದ್ವೇಷವೂ ವಿದ್ಯಾರ್ಥಿನಿಯಲ್ಲಿ ಹುಟ್ಟಿತ್ತು. ಇದರ ಸೇಡು ತೀರಿಸುವ ಸಲುವಾಗಿ ತನ್ನ ಸ್ನೇಹಿತೆಯೊಬ್ಬಳ ಸಹಾಯ ಪಡೆದುಕೊಂಡ ಆರನೇ ತರಗತಿ ವಿದ್ಯಾರ್ಥಿನಿ , ಸ್ಟಾಫ್ ರೂಮ್ ನಲ್ಲಿ ಶಿಕ್ಷಕಿಯರಿಲ್ಲದ ಸಂದರ್ಭ ನೋಡಿಕೊಂಡು ಎಲ್ಲಿಂದಲೋ ತಂದಿದ್ದ ಎಕ್ಸ್ಪೈರಿ ಆದಂತಹ ಮಾತ್ರೆಗಳನ್ನು ಗಣಿತ ಶಿಕ್ಷಕಿಗೆ ಸೇರಿದ ವಾಟರ್ ಬಾಟಲಿಗೆ ಹಾಕಿದ್ದಾರೆ.

ಇದೇ ಬಾಟಲಿಯ ನೀರನ್ನು ಗಣಿತ ಶಿಕ್ಷಕಿ ಸೇರಿದಂತೆ ಇನ್ನೋರ್ವ ಶಿಕ್ಷಕಿಯೂ ಕುಡಿದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಶಿಕ್ಷಕಿಯೊಬ್ಬರಿಗೆ ಅಸ್ವಸ್ಥತೆ ಕಂಡುಬಂದಿದೆ, ಇನ್ನೋರ್ವ ಶಿಕ್ಷಕಿಗೆ ಮುಖದಲ್ಲಿ ಊತ ಉಂಟಾಗಿದೆ. ನೀರಿನ ರುಚಿಯಲ್ಲಿ ಬದಲಾವಣೆ ಕಂಡುಬಂದು ಸೂಕ್ಷ್ಮವಾಗಿ ಗಮನಿಸಿದಾಗ ನೀರಲ್ಲಿ ಮಾತ್ರೆಗಳಿರುವುದು ಕಂಡುಬಂದಿದೆ. ಈ ಕುರಿತು ವಿಚಾರಿಸಿ ಸಿಸಿಟಿವಿ ಗಮನಿಸಿದಾಗ ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದೆ.

ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ಕಾರುಬಾರು ಮಾಡುವ ವಿದ್ಯಾರ್ಥಿನಿಯ ನಡೆಗೆ ಇಡೀ ಶಾಲಾ ಆಡಳಿತ ಮಂಡಳಿ, ಹೆತ್ತವರು ನಿಬ್ಬೆರಗಾಗಿದ್ದಾರೆ. ಇಂತಹ ದೃಶ್ಯವನ್ನು ಬೇರೆ ಎಲ್ಲಿಯಾದರೂ ಮಾಡಿರುವುದನ್ನು ಕಂಡು ಕೃತ್ಯ ಎಸಗಿದರೋ? ಅಥವಾ ಯಾರಾದರೂ ಹೇಳಿಕೊಟ್ಟರೇ ಅನ್ನುವ ಅನುಮಾನ ಇತರೆ ಹೆತ್ತವರಲ್ಲಿ ಮೂಡಿದೆ. ಗೂಗಲ್ ಮೂಲಕ ಕಂಡುಹಿಡಿದರೇ, ಇಷ್ಟು ಸಣ್ಣ ವಯಸ್ಸಿನಲ್ಲಿ ಮಕ್ಕಳಲ್ಲಿರುವ ಭಾವನೆಗಳನ್ನು ಹೆತ್ತವರು ಹಾಗೂ ಶಿಕ್ಷಕರು ಅರಿಯಬೇಕಿದೆ. ಶಿಕ್ಷಣವನ್ನು ಸ್ಪರ್ಧೆಯಂತೆ ಕಲಿಸುವ ಪರಿಣಾಮ ಇಂತಹ ವಿಕಾರತೆಗಳು ಎದುರಾಗುತ್ತಿವೆ.

ಕೃತ್ಯವೆಸಗಿದ ವಿದ್ಯಾರ್ಥಿನಿಯರನ್ನು ತಕ್ಷಣ ಡಿಬಾರ್ , ಟಿ.ಸಿ ಕೊಟ್ಟು ಕಳುಹಿಸಲಾಗುತ್ತದೆ. ಶಾಲಾ ಆಡಳಿತ ಮಂಡಳಿ ವಿಚಾರಗಳನ್ನು ಮುಚ್ಚಿಟ್ಟು, ಶಾಲೆಯ ಹೆಸರಿಗೆ ಕಳಂಕ ಬಾರದೆಂದು ನೋಡಿಕೊಳ್ಳುತ್ತಾರೆ. ಪ್ರಕರಣ ಕಾನೂನು ವ್ಯಾಪ್ತಿಗೆ ಬಂದರೆ ಮಾತ್ರ ವಿದ್ಯಾರ್ಥಿ ನಿಯರ ಸಮಾಲೋಚನೆ ಸಾಧ್ಯ. ಈ ಮೂಲಕ ಸಣ್ಣ ಮನಸ್ಸುಗಳಲ್ಲಿರುವ ಗೊಂದಲಗಳ ನಿವಾರಣೆ ಸಾಧ್ಯ. ಭವಿಷ್ಯದಲ್ಲಿ ತಪ್ಪು ಹಾದಿ ಹಿಡಿಯುವುದನ್ನು ತಪ್ಪಿಸಬಹುದು. ಶಿಕ್ಷಣ ಇಲಾಖೆಯೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Related Posts

Leave a Reply

Your email address will not be published.