ಉಳ್ಳಾಲದ ಒಳರಸ್ತೆಗಳ ಗುಂಡಿಗಳಲ್ಲಿ ಶಾಸಕರ ನಗುಮುಖ ಎದ್ದು ಕಾಣುತ್ತಿದೆ – ಸುನಿಲ್ ಕುಮಾರ್ ಬಜಾಲ್
ಉಳ್ಳಾಲ ಕ್ಷೇತ್ರದಲ್ಲಿ ಭಾರೀ ಅಭಿವೃದ್ಧಿಯಾಗಿದೆ ಎಂದು ಒಂದು ಕಡೆ ಡಂಗುರ ಸಾರುತ್ತಿದ್ದರೆ,ಮತ್ತೊಂದು ಕಡೆ ಒಳರಸ್ತೆಗಳ ಅವ್ಯವಸ್ಥೆ, ಚರಂಡಿಗಳ ದುರಾವಸ್ಥೆ, ಆರೋಗ್ಯ ಕ್ಷೇತ್ರಗಳ ಸಮಸ್ಯೆಗಳು, ಆಡಳಿತಾತ್ಮಕ ಸಂಕಷ್ಟಗಳು,ಸಾಮಾಜಿಕ ಅನಾಚಾರಗಳನ್ನು ಕ್ಷೇತ್ರದ ಜನತೆ ನಿರಂತರವಾಗಿ ಅನುಭವಿಸುತ್ತಿದ್ದಾರೆ. ಒಳರಸ್ತೆಗಳಲ್ಲಿ ಚೆಂಬುಗುಡ್ಡ ದಾರಂದಬಾಗಿಲು ಪಂಡಿತ್ ಹೌಸ್ ಸಂಪರ್ಕ ರಸ್ತೆಯಂತೂ ಕಳೆದ 25 ವರ್ಷಗಳಿಂದ ತೇಪೆ ಕಾರ್ಯಕ್ಕೆ ಒಗ್ಗಿ ಹೋಗಿದೆಯೇ ಹೊರತು ಸಂಪೂರ್ಣ ಕಾಯಕಲ್ಪಕ್ಕೆ ಇನ್ನೂ ವ್ಯವಸ್ಥೆಯಾಗಿಲ್ಲ.
ಮಾತ್ರವಲ್ಲದೆ ಇಡೀ ಕ್ಷೇತ್ರದ ಎಲ್ಲಾ ಒಳರಸ್ತೆಗಳ ಗುಂಡಿಗಳಲ್ಲಿ ಅಲ್ಲಿನ ಸ್ಥಳೀಯ ಶಾಸಕರ ನಗುಮುಖವು ಎದ್ದು ಕಾಣುತ್ತಿದೆ ಎಂದು ಫೆಡರೇಶನ್ ಆಫ್ ಕರ್ನಾಟಕ ಅಟೋರಿಕ್ಷಾ ಡ್ರೈವರ್ಸ್ ಯೂನಿಯನ್ (FKARDU)ನ ಜಿಲ್ಲಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ರವರು ಸ್ಥಳೀಯ ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಅವರು ಇಂದು ಚೆಂಬುಗುಡ್ಡ ಜಂಕ್ಷನ್ ನಲ್ಲಿ ದಾರಂದಬಾಗಿಲು ಪಂಡಿತ್ ಹೌಸ್ ಗೆ ಸಂಪರ್ಕ ಸಾಧಿಸುವ ಪ್ರಮುಖ ರಸ್ತೆಯ ದುರಾವಸ್ಥೆಯನ್ನು ಖಂಡಿಸಿ ಆಯೋಜಿಸಲಾದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.
DYFI ಜಿಲ್ಲಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್ ರವರು ಮಾತನಾಡುತ್ತಾ, ಚೆಂಬುಗುಡ್ಡ ದಾರಂದಬಾಗಿಲು ಪಂಡಿತ್ ಹೌಸ್ ಸಂಪರ್ಕ ರಸ್ತೆಗೆ ಕಳೆದ ಅನೇಕ ವರ್ಷಗಳಲ್ಲಿ ಹಲವು ಬಾರಿ ಅನುದಾನ ಬಿಡುಗಡೆಯಾಗಿದೆ ಎಂದು ಸುಳ್ಳು ಹೇಳಿ ಜನತೆಯನ್ನು ಯಾಮಾರಿಸಿದ ಉಳ್ಳಾಲ ನಗರಸಭೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಈಗ ಯಾವುದೇ ಚಕಾರಶಬ್ದ ಎತ್ತುತ್ತಿಲ್ಲ.ಬೆಳವಣಿಗೆಯ ದ್ರಷ್ಠಿಯಲ್ಲಿ ಮೇಲ್ದರ್ಜೆಗೇರಬೇಕಾದ ಉಳ್ಳಾಲ ನಗರಸಭೆಗೆ ಇನ್ನೂ ಕೂಡ ಖಾಯಂ ಪೌರಾಯುಕ್ತರಿಲ್ಲದೆ ಸೊರಗುತ್ತಿದೆ.ಕ್ಷೇತ್ರದ ಶಾಸಕರು ಪ್ರಸ್ತುತ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದರೂ ಕ್ಷೇತ್ರದ ಜನತೆಗೆ ಮಾತ್ರ ಸಂಕಷ್ಟಗಳು ತಪ್ಪಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ರೈತ ಸಂಘಟನೆಯ ಜಿಲ್ಲಾ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್,CITU ಜಿಲ್ಲಾ ಮುಖಂಡರಾದ ಜಯಂತ ನಾಯಕ್,FKARDU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅನ್ಸಾರ್ ರವರು ಮಾತನಾಡಿ,ಉಳ್ಳಾಲ ನಗರಸಭೆಯ ದುರಾಡಳಿತವನ್ನು ಹಾಗೂ ಅಧಿಕಾರಿಗಳ ದುರ್ವರ್ತನೆ ಖಂಡಿಸಿ ಕೂಡಲೇ ರಸ್ತೆ ದುರಸ್ತಿಯಾಗದೇ ಇದ್ದಲ್ಲಿ ಪ್ರಬಲ ಹೋರಾಟವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿಸಂಘದೀಕರಿಸಿದ ಉಳ್ಳಾಲ ನಗರಸಭೆಯ ಅಧಿಕಾರಿಗಳಾದ ಆರ್.ಪಿ.ನಾಯಕ್ ರವರು ಕೂಡಲೇ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ರೋಹಿದಾಸ್ ತೊಕ್ಕೋಟು,ರಫೀಕ್ ಹರೇಕಳ, ಇಬ್ರಾಹಿಂ ಮದಕ,DYFI ನಾಯಕರಾದ ರಿಜ್ವಾನ್ ಹರೇಕಳ,ಎಂ.ಕೆ.ರಿಯಾಜ್, ರಿಹಾಬ್ ಮುಂತಾದವರು ಹಾಜರಿದ್ದರು.
ಪ್ರತಿಭಟನೆಯ ನೇತ್ರತ್ವವನ್ನು ಅಟೋರಿಕ್ಷಾ ಚಾಲಕರ ಸಂಘದ ಮುಖಂಡರಾದ ದಯಾನಂದ, ಪುರಂದರ, ಮುತ್ತಲೀಫ್, ಪದ್ಮನಾಭ ಮುಂತಾದವರು ವಹಿಸಿದ್ದರು.