ಉಳ್ಳಾಲ : ಪಿಕಪ್- ಗೂಡ್ಸ್ ಲಾರಿ ನಡುವೆ ಅಪ್ಪಚ್ಚಿಯಾದ ಕಾರು
ಉಳ್ಳಾಲ : ಪಿಕಪ್ ವಾಹನವೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಅದರ ಹಿಂಬದಿಗೆ ಗುದ್ದಿದ ಸ್ಬಿಫ್ಟ್ ಕಾರಿಗೆ ಅದರ ಹಿಂದುಗಡೆಯಿದ್ದ ಗೂಡ್ಸ್ ಲಾರಿ ಢಿಕ್ಕಿ ಹೊಡೆದು ಎರಡು ವಾಹನಗಳ ನಡುವೆ ಸಿಲುಕಿದ ಕಾರು ಅಪ್ಪಚ್ಚಿಯಾದ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸಂಭವಿಸಿದೆ.
ದೇರಳಕಟ್ಟೆ ಕಡೆಯಿಂದ ಕೆಲಸ ಮುಗಿಸಿ ಮಂಗಳೂರಿನತ್ತ ಮೂವರು ಯುವತಿಯರಿದ್ದ ಕಾರು ತೆರಳುವಾಗ , ಜನದಟ್ಟಣೆ ತೊಕ್ಕೊಟ್ಟು ರಿಕ್ಷಾ ಪಾಕ್೯ ಸಮೀಪದಲ್ಲೇ ಎದುರುಗಡೆಯಿದ್ದ ಪಿಕಪ್ ವಾಹನದ ಚಾಲಕ ಹಠಾತ್ ಬ್ರೇಕ್ ಹೊಡೆದಿದ್ದಾನೆ. ಪರಿಣಾಮ ಹಿಂದುಗಡೆಯಿದ್ದ ಸ್ವಿಫ್ಟ್ ಕಾರು ಅದರ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಅದೇ ದಾರಿಯಾಗಿ ಜಲ್ಲಿಕಲ್ಲು ಹೇರಿಕೊಂಡು ತೆರಳುತ್ತಿದ್ದ ಗೂಡ್ಸ್ ಲಾರಿ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಎದುರು ಹಾಗೂ ಹಿಂಬದಿಯಿಂದ ವಾಹನಗಳು ಢಿಕ್ಕಿ ಹೊಡೆದ ಪರಿಣಾಮ ಕಾರಿನ ಎದುರುಭಾಗ ಹಾಗು ಹಿಂಭಾಗ ನುಜ್ಜುಗುಜ್ಜಾಗಿ ಕಾರು ಸಂಪೂರ್ಣ ಹಾನಿಯಾಗಿದೆ. ಆದರೆ ಕಾರಿನಲ್ಲಿದ್ದ ಯುವತಿಯರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಯಿತು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.