ಫೆ.20ರಿಂದ 25ರ ವರೆಗೆ ಉಳ್ಳಾಲ್ ಪ್ರೀಮಿಯರ್ ಲೀಗ್ -2023
ಉಳ್ಳಾಲ: ಉಳ್ಳಾಲ್ ಕ್ರಿಕೆಟ್ ಬೋರ್ಡ್ ವತಿಯಿಂದ ಎಂಟನೇ ಅವಧಿಯ ಟೆನಿಸ್ ಬಾಲ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉಳ್ಳಾಲ್ ಪ್ರೀಮಿಯರ್ ಲೀಗ್ ಫೆ.20 ರಿಂದ ಫೆ.25 ರವರೆಗೆ ಐದು ದಿನಗಳ ಕಾಲ ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಉಳ್ಳಾಲದ ಸೀಗ್ರೌಂಡ್ ನಲ್ಲಿ ನಡೆಯಲಿದೆ ಎಂದು ಉಳ್ಳಾಲ್ ಕ್ರಿಕೆಟ್ ಬೋರ್ಡ್ ಇದರ ಅಧ್ಯಕ್ಷ ಯು.ಬಿ ಸಲೀಂ ಹೇಳಿದರು. ಅವರು ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್‍ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಜಾತಿ ಮತ ಬೇಧಭಾವವಿಲ್ಲದೆ ಯುಸಿಬಿ ಎಂಟನೆ ಅವಧಿಯಲ್ಲಿ 3 ಬಾರಿ ಪೆಡ್ಲೈಟ್ ಕ್ರಿಕೆಟ್ ಪಂದ್ಯಾಟವನ್ನು ಉಳ್ಳಾಲದಲ್ಲಿ ಆಯೋಜಿಸುತ್ತಾ ಬಂದಿದೆ.
ಗೌರವಾಧ್ಯಕ್ಷ ಶಾಸಕ ಯು.ಟಿ ಖಾದರ್ ಅವರ ನೇತೃತ್ವದಲ್ಲಿ ಉಳ್ಳಾಲದ ಎಲ್ಲರನ್ನೂ ಸೇರಿಸಿಕೊಂಡು ಪಂದ್ಯಾಟ ಆಯೋಜನೆ ಮಾಡಲಾಗಿದೆ. ಫೆ. 24 ರಂದು 40 ವರ್ಷ ಮೇಲ್ಪಟ್ಟವರ ಮಾಸ್ಟರ್ಸ್ ಕ್ರಿಕೆಟ್ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಲಿದೆ. ಫೆ.25 ರಂದು ಸಂಜೆ 4ಕ್ಕೆ ಡ್ರಗ್ ಸೇವನೆ ವಿರುದ್ಧ ಜಾಗೃತಿ ಕಾರ್ಯಕ್ರಮ ಬೈಕ್ ಜಾಥಾ ಮೂಲಕ ವಿವಿಧ ವೈದ್ಯಕೀಯ ಕಾಲೇಜುಗಳ ನೇತೃತ್ವದಲ್ಲಿ ತೊಕ್ಕೊಟ್ಟು ಬಸ್ ನಿಲ್ದಾಣದಿಂದ ಉಳ್ಳಾಲದವರೆಗೆ ನಡೆಯಲಿದೆ. ಪ್ರಸ್ತುತ ದಿನಗಳಲ್ಲಿ ಶಾಲಾ ಮಟ್ಟಕ್ಕೂ ಡ್ರಗ್ ಸೇವನೆ ತಲುಪಿರುವ ಆತಂಕದಲ್ಲಿ ಬೋರ್ಡ್ ಸಾಮಾಜಿಕ ಕಳಕಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಸುದ್ಧಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮೊಯ್ದೀನ್ ಯು.ಕೆ, ಸದಸ್ಯರುಗಳಾದ ರಾಜಾರಾಮ್ ನಾಯಕ್, ನವಾಝ್ ಕಲ್ಲಾಪು, ಶಾಖಿರ್ ಉಳ್ಳಾಲ್, ರಫೀಕ್ ಉಳ್ಳಾಲ್ ಉಪಸ್ಥಿತರಿದ್ದರು.