ಉಳ್ಳಾಲ: ಕುಡಿಯುವ ನೀರಿಗೆ ತೊಂದರೆಯಾಗದಂತೆ ಟಾಸ್ಕ್ ಫೋರ್ಸ್ ರಚನೆ: ಯು.ಟಿ ಖಾದರ್

ಉಳ್ಳಾಲ:  ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಅಭಾವ ತಪ್ಪಿಸಲು ಟ್ಯಾಂಕರ್ ಮಾನಿಟರಿಂಗ್ ಆಪ್‌ನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು. ತಾಂತ್ರಿಕ ತೊಂದರೆಗಳಾಗದಂತೆ ಪೂರ್ವಭಾವಿಯಾಗಿ ಅಧಿಕಾರಿಗಳಿಗೆ, ಪಿಡಿಓಗಳಿಗೆ  ಪ್ರಾತ್ಯಕ್ಷಿಕೆ ಹಾಗೂ ತರಬೇತಿಗಳನ್ನು  ನೀಡುವ ಯೋಜನೆ ರೂಪಿಸಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಹೇಳಿದರು.

ದೇರಳಕಟ್ಟೆಯ ದ ಕಂಫರ್ಟ್ ಇನ್ ಸಭಾಂಗಣದಲ್ಲಿ  ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧಿಕಾರಿಗಳು , ಅಧ್ಯಕ್ಷರು, ಉಪಾಧ್ಯಕ್ಷರು , ಉಳ್ಳಾಲ ತಾಲೂಕು ತಹಶೀಲ್ದಾರ್ ಸಮ್ಮುಖದಲ್ಲಿ ಹಮ್ಮಿಕೊಂಡ  ಕುಡಿಯುವ ನೀರು ಕುರಿತ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

 ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಮಂಗಳೂರು ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಯೋಜನೆಗೆ ತೊಂದರೆಯಾಗದಂತೆ  ಅಧಿಕಾರಿಗಳು, ಪಿಡಿಓ, ಸೆಕ್ರೆಟರಿಗಳು ಪಂಚಾಯಿತಿ ಅಧ್ಯಕ್ಷರು , ಗ್ರಾಮದ ಹಿರಿಯರನ್ನು ಕ್ರೂಢೀಕರಿಸಿಕೊಂಡು ಟಾಸ್ಕ್ ಫೋರ್ಸ್ ರಚಿಸಲಾಗಿದೆ.  ಕಳೆದ ವರ್ಷ ಯಾವ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಅನ್ನುವ ಕುರಿತು ವರದಿಯನ್ನು ಅಧಿಕಾರಿಗಳಿಂದ ಪಡೆಯಲಾಗಿದೆ. ಆ ಭಾಗಗಳಲ್ಲಿ ಪ್ರಸಕ್ತ ವರ್ಷ ತೊಂದರೆಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಹಾಗೂ ಅಧಿಕಾರಿಗಳು ಪೂರ್ವಭಾವಿಯಾಗಿ ತಯಾರಿರಬೇಕು ಅನ್ನುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಜಲಯೋಜನೆ, ಕಂದಾಯ,  ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ,  ಪಶುಸಂಗೋಪನಾ  ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ಕುಡಿಯುವ ನೀರಿನ  ಯೋಜನೆಯಲ್ಲಿ  ಕಾರ್ಯಾಚರಿಸಲಿದೆ. ಇಲಾಖೆಗಳ ಎಲ್ಲಾ ಅಧಿಕಾರಿಗಳು  ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ತಹಶೀಲ್ದಾರ್ ಪುಟ್ಟರಾಜು ಡಿ., ಉಪತಹಶೀಲ್ದಾರ್ ನವನೀತ್ ಮಾಳವ, ಕಂದಾಯ ನಿರೀಕ್ಷಕ ಪ್ರಮೋದ್ ಕುಮಾರ್, ಕೃಷಿ ಇಲಾಖೆ ಅಧಿಕಾರಿ ವೀಣಾ ರೈ,  ಮಂಗಳೂರು ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾ.ಪಂ ಅಧ್ಯಕ್ಷರು ಭಾಗವಹಿಸಿದ್ದರು.

Related Posts

Leave a Reply

Your email address will not be published.