ಉಳ್ಳಾಲ : ಕೃತಕ ನೆರೆ ದಾಟಿ 40 ಮನೆಗಳಿಗೆ ವಿದ್ಯುತ್ ಪೂರೈಸಿದ ಮೆಸ್ಕಾಂ ಸಿಬ್ಬಂದಿ

ಉಳ್ಳಾಲ: ಕರ್ತವ್ಯವಾದರೂ ನಿಭಾಯಿಸಲು ಛಲ ಬೇಕು. ಮಳೆಗಾಲದ ಸಂದರ್ಭ ಮೆಸ್ಕಾಂ ಪವರ್ಮೆನ್‍ಗಳು ಜನರ ಬಾಯಿಂದ ಕೇಳುವುದೇ ಜಾಸ್ತಿ. ಆದರೆ ಮೆಸ್ಕಾಂನ ಉಳ್ಳಾಲ-2 ಘಟಕದ ಪವರ್ಮೆನ್ ವಸಂತ್ ಹಾಗೂ ಸುರೇಶ್ ಗದ್ದೆಯೊಂದರಲ್ಲಿ ಕೃತಕ ನೆರೆಯಾಗಿದ್ದರೂ ಅದನ್ನು ಕಷ್ಟಪಟ್ಟು ದಾಟಿ 40 ಮನೆಗಳಿಗೆ ವಿದ್ಯುತ್ ಪೂರೈಸಿದ್ದಾರೆ. ಈ ಕುರಿತ ವೀಡಿಯೋವನ್ನು ಮೆಸ್ಕಾಂ ಜೆ.ಇ ನಿತೇಶ್ ಹೊಸಗದ್ದೆ ಇವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮ್ಮ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳ್ಮ ಗ್ರಾಮದ ಬೆರಿಕೆ ಎಂಬಲ್ಲಿ ಬಿರುಗಾಳಿ, ಮಳೆಗೆ ವಿದ್ಯುತ್ ಕಂಬದ ತಂತಿಗಳು ಪರಸ್ಪರ ಸ್ಪರ್ಶಿಸಿ ಸ್ಥಳೀಯ 40 ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ಸ್ಥಳೀಯರು ಮೆಸ್ಕಾಂಗೆ ದೂರು ನೀಡಿದ್ದರು. ಸ್ಥಳಕ್ಕೆ ಮೆಸ್ಕಾಂನ ಪವರ್ ಮೆನ್ ವಸಂತ್ ಹಾಗೂ ಸುರೇಶ್ ಎಂಬವರು ಭೇಟಿ ನೀಡಿದ್ದಾರೆ. ಆದರೆ ಟ್ರಿಪ್ ಆಗಿದ್ದ ವಿದ್ಯುತ್ ಕಂಬವು ನೆರೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿತ್ತು. ಗದ್ದೆಯಲ್ಲಿರುವ ನೆರೆ ನೀರನ್ನು ಲೆಕ್ಕಿಸದ ಸಿಬ್ಬಂದಿ ಸ್ಥಳೀಯರೋರ್ವರ ಮಾರ್ಗದರ್ಶನದಿಂದ ನೀರಲ್ಲಿ ಮುಳುಗಿ ಒದ್ದೆಯಾಗಿಯೇ ಸಾಗಿ ಕಂಬವನ್ನೇರಿ ತುರ್ತು ದುರಸ್ಥಿ ಕಾರ್ಯ ನಡೆಸಿ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹಲವು ವರ್ಷಗಳಿಂದ ಮೆಸ್ಕಾಂನಲ್ಲಿ ಸೇವೆಸಲ್ಲಿಸುತ್ತಿರುವ ವಸಂತ್ ತಮ್ಮ ಪ್ರಾಮಾಣಿಕತೆಯ ಸೇವೆಗೆ ಸಂಸ್ಥೆ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದವರಾಗಿದ್ದಾರೆ.

Related Posts

Leave a Reply

Your email address will not be published.