ಉಳ್ಳಾಲ: ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿಗೆ ಹುಟ್ಟೂರ ಸನ್ಮಾನ
ದೇರಳಕಟ್ಟೆ : ಹುಟ್ಟೂರ ಅಭಿನಂದನಾ ಸಮಿತಿ ಉಳ್ಳಾಲ ತಾಲೂಕು ಇದರ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ
ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.
ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಇಲ್ಲದೆ ದೇಶದ ಆಡಳಿತ ನಡೆಯಲು ಸಾಧ್ಯವಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಕಾರ್ಯಾಂಗದ ಜವಬ್ಧಾರಿ ಹೆಚ್ಚಾಗಿದೆ. ಆದರೆ ಈ ಜವಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸುವವರು ಕಡಿಮೆಯಾಗಿದ್ದಾರೆ. ಕೆಲವು ಅಧಿಕಾರಿಗಳಷ್ಟೇ ಇಂದಿಗೂ ಕಾನೂನಿನ ಅಡಿಯಲ್ಲೇ ಕಾರ್ಯೋನ್ಮುಖರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರಿದ್ದಾರೆ.ಇಂತಹ ಅರ್ಹ ಅಧಿಕಾರಿಗಳಿಗೆ ಸಮಾಜದ ಅಭಿನಂದನೆಗಳು ಸಲ್ಲಬೇಕು ಎಂದು ಹೇಳಿದರು.
ಫಾದರ್ ಮುಲ್ಲರ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರೆ.ಫಾ.ರೋಶನ್ ಕ್ರಾಸ್ತಾ ನಮ್ಮ ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಬೇಕಾದರೆ ಶಿಕ್ಷಣ ಅತೀ ಮುಖ್ಯ. ಇತ್ತೀಚಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಾಳ್ಮೆ ಕಡಿಮೆ. ಸಂಯಮದಿಂದ ಉನ್ನತ ಶಿಕ್ಷಣ ಪಡೆದು ಡಾ.ವಿದ್ಯಾಕುಮಾರಿಯಂತೆ ಗೌರವಯುತ ಶಿಕ್ಷಣ ಪಡೆಯುವಂತಾಗಬೇಕು ಎಂದರು.
ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಾಲ್ಯದಲ್ಲಿ ಕಷ್ಟದಲ್ಲಿ ಬೆಳೆದ ನನಗೆ ತಂದೆ ತಾಯಿ ನೀಡಿದ ಸ್ಪೂರ್ತಿಯೇ ಇಂದು ದಾರಿ ದೀಪವಾಗಿದೆ.ನನ್ನ ತಂದೆಗೆ ವೈದ್ಯೆಯಾಗಬೇಕೆಂಬ ಕನಸು ಇತ್ತು. ಅದು ನನಸಾಗದೇ ಇದ್ದಾಗ ಐಎಎಸ್ ಮಾಡು ಎಂದು ಹುರಿದುಂಬಿಸಿದರು. ಹುಟ್ಟಿ ಬೆಳೆದ ಊರಿನಲ್ಲಿ ಸಿಗುವ ಸನ್ಮಾನದ ಭಾಗ್ಯ ವಿಶೇಷ ಅನುಭವ ನೀಡಿದೆ ಮತ್ತು ಎಲ್ಲರಿಗೂ ಕೃತಜ್ಞತನಾಗಿದ್ದಾನೆ ಎಂದು ಹೇಳಿದರು
ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಹರೇಕಳ ಅವರು ಅಭಿನಂದನಾ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಹರೇಕಳ ಹಾಜಬ್ಬರು ಕೂಡಾ ಡಾ.ವಿದ್ಯಾ ಕುಮಾರಿ ಅವರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಣಚೂರು ಇಸ್ಲಾಮಿಕ್ ಎಜ್ಯಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಕಣಚೂರು ಮೋನು ಭಾಗವಹಿಸಿ ಮಾತನಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಹೈದರ್ ಪರ್ತಿಪ್ಪಾಡಿ . ಸಮಿತಿಯ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ,ತ್ಯಾಗಂ ಹರೇಕಳ, ರಫೀಕ್ ಮಾಸ್ಟರ್, ಕಣಚೂರು ಸಮೂಹ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.