500 KG ಗಾಂಜಾ ಇಲಿ ತಿಂದಿದೆ!’ ವಿಚಿತ್ರ ಹೇಳಿಕೆ ನೀಡಿದ ಯುಪಿ ಪೊಲೀಸರು

ಶೇರ್‌ಗಡ್‌ ಮತ್ತು ಹೈವೇ ಪೊಲೀಸ್ ಠಾಣೆಯ ಗೋದಾಮುಗಳಲ್ಲಿ ವಶಕ್ಕೆ ಪಡೆದು ಇರಿಸಿದ್ದ 500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದಿವೆ ಎಂದು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್-1985 (ಎನ್‌ಡಿಪಿಎಸ್) ಅಡಿಯಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಉತ್ತರ ಪ್ರದೇಶದ ಮಥುರಾ ಪೊಲೀಸರು ವರದಿ ಸಲ್ಲಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಿಸಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಒದಗಿಸುವಂತೆ ಮಥುರಾ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿತ್ತು. ಈ ವೇಳೆ ಪೊಲೀಸರು ನ್ಯಾಯಾಲಯದಲ್ಲಿ ವಿಚಿತ್ರವಾದ ಪ್ರತಿಪಾದನೆ ಮಾಡಿದ್ದಾರೆ.

ಮಥುರಾ ಪೊಲೀಸರು ನ್ಯಾಯಾಲಯಕ್ಕೆ ನೀಡಿದ ಸ್ಪಷ್ಟನೆಯಲ್ಲಿ, “ಇಲಿಗಳು ಗಾತ್ರದಲ್ಲಿ ಸಣ್ಣದಾಗಿದ್ದರೂ, ಅವುಗಳಿಗೆ ಪೊಲೀಸರ ಭಯ ಇಲ್ಲ. ಠಾಣೆಯ ಪೊಲೀಸರಿಗೆ ಈ ಸಮಸ್ಯೆ ಪರಿಹರಿಸುವಲ್ಲಿ ಪರಿಣಿತರಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

“ಸಂಗ್ರಹಿಸಿದ ವಸ್ತುಗಳನ್ನು ಇಲಿಗಳಿಂದ ರಕ್ಷಿಸಲು ಪೊಲೀಸ್ ಠಾಣೆಯಲ್ಲಿ ಯಾವುದೇ ಸ್ಥಳವಿಲ್ಲ” ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. “ಶೇಖರಣಾ ಪ್ರದೇಶಗಳಲ್ಲಿ ಇರಿಸಲಾಗಿರುವ ವಸ್ತುಗಳನ್ನು ರಕ್ಷಿಸಲು ಪೊಲೀಸರು ಸಾಧ್ಯವಿಲ್ಲ ಎಂದು ಕಂಡುಕೊಂಡಿದ್ದಾರೆ. ದಾವೆಗೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ಒದಗಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 26 ಎಂದು ನಿಗದಿಪಡಿಸಿದೆ ” ಎಂದು ವಿಶೇಷ ಪ್ರಾಸಿಕ್ಯೂಟರ್ ರಣವೀರ್ ಸಿಂಗ್ ಹೇಳಿದ್ದಾರೆ.

ಮೇ ತಿಂಗಳ ವೇಳೆ ಮಥುರಾದಲ್ಲಿ ಟ್ರಕ್‌ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿತ್ತು. ಆರೋಪಿಗಳು ರಾಗಿ ಮೂಟೆಗಳಲ್ಲಿ 386 ಕೆಜಿ ಗಾಂಜಾವನ್ನು ಬಚ್ಚಿಟ್ಟು ಸಾಗಿಸುತ್ತಿದ್ದರು. ಈ ಟ್ರಕ್ ಅನ್ನು ಶೇರ್ಗಢ್ ಪ್ರದೇಶದ ಜಟ್ವಾರಿ ಗ್ರಾಮದಲ್ಲಿ ಪೊಲೀಸರು ತಡೆದ್ದು,  ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ವಶಪಡಿಸಿಕೊಂಡ ಗಾಂಜಾವನ್ನು ಒಪ್ಪಿಸುವಂತೆ ನ್ಯಾಯಾಲಯವು ಪೊಲೀಸರಿಗೆ ತಿಳಿಸಿತ್ತು. ಈ ವೇಳೆ ಶೇರ್‌‌ಗಡ್‌ ಪೊಲೀಸರು ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published.