ಅಜೇಂದ್ರ ಶೆಟ್ಟಿ‌ ಮರ್ಡರ್ ಕೇಸ್: ಹೊಸ ಕಾರು ಕೊಟ್ಟಿತು ಆರೋಪಿಯ ಸುಳಿವು!?

ಕುಂದಾಪುರ: ಫೈನಾನ್ಸ್ ಸಂಸ್ಥೆಯ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫೈನಾನ್ಸ್ ಸಂಸ್ಥೆಯ ಪಾಲುದಾರ ಅನೂಪ್‌ ಶೆಟ್ಟಿ ಗೋವಾದ ಹೊಟೇಲ್ ಒಂದರಲ್ಲಿ ಮೂರು ದಿನಗಳ‌ ಹಿಂದೆಯೇ ರೂಮ್‌ ಕಾಯ್ದಿರಿಸಿದ್ದ ಎನ್ನುವ ಬಲವಾದ ಮಾಹಿತಿ ಬಯಲಾಗಿದೆ.

ಅನೂಪ್ ಶೆಟ್ಟಿಯನ್ನು ಗೋವಾದಿಂದ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕೆಲವು ಮಹತ್ತರವಾದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಆರೋಪಿ ಅನೂಪ್ ಕೊಲೆ ಮಾಡಿ ಗೋವಾಕ್ಕೆ ಪರಾರಿಯಾಗುವ ಯೋಜನೆಯನ್ನು ಮೊದಲೇ ಹಾಕಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

ಚೀಟಿ ವ್ಯವಹಾರದಲ್ಲಿ ಪಾಲು ಕೊಟ್ಟಿಲ್ಲ:
ಅಜೇಂದ್ರ ಅವರ ಇತ್ತೀಚಿನ‌ ಬೆಳವಣಿಗೆಯನ್ನು ಸಹಿಸಲಾಗದೆ ಆರೋಪಿ‌ ಅನೂಪ್‌ ಈ‌ ಕೃತ್ಯ ಎಸಗಿರುವುದಾಗಿ ಅಜೇಂದ್ರ ಅವರ ಆಪ್ತವಲಯ ಹೇಳಿಕೊಂಡಿತ್ತು. ಇತ್ತೀಚೆಗಷ್ಟೇ ತಮ್ಮ‌ ಕಾರು ಅಪಘಾತಕ್ಕೀಡಾದ ಬಳಿಕ ಹೊಸ ಕಾರನ್ನು ಖರೀದಿಸಿದ್ದು ಮಾತ್ರವಲ್ಲದೇ ಬ್ಯಾಂಕ್‌ ಸಾಲದ ನೆರವಿನಿಂದ ತಮ್ಮ‌ ಸಹೋದರನಿಗೆ ಟಿಪ್ಪರ್ ಖರೀದಿಸಿ ಕೊಟ್ಟಿದ್ದರು.‌ ಮಾತ್ರವಲ್ಲದೇ ಅಜೇಂದ್ರ ಫೈನಾನ್ಸ್ ವ್ಯವಹಾರದಲ್ಲಿ ಹೊಸ ಚೀಟಿ ವ್ಯವಹಾರವೊಂದನ್ನು ಪ್ರಾರಂಭಿಸಿದ್ದು, ಇದರಲ್ಲಿ ಅನೂಪ್ ತನಗೂ ಪಾಲು ಕೊಡಬೇಕೆಂದು ಕೇಳಿಕೊಂಡಿದ್ದನು. ಇದಕ್ಕೆ ಅಜೇಂದ್ರ ಪಾಲು ಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಅನೂಪ್‌ ಈ‌ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಕಾರು ಕೊಟ್ಟಿತು ಆರೋಪಿಯ ಕುರಿತಾದ ಕ್ಲ್ಯೂ!?:

ಅನೂಪ್‌ ಕೃತ್ಯವೆಸಗಿ ತನ್ನ ಬುಲೆಟ್ ಅನ್ನು ಫೈನಾನ್ಸ್ ಕಚೇರಿ‌ ಎದುರಿಟ್ಟು ಅಜೇಂದ್ರ ಅವರ ಹೊಸ ಕಾರಿನಲ್ಲಿ ಪರಾರಿಯಾಗಿದ್ದಾನೆ. ಆದರೆ ಅನೂಪ್‌ ಪೊಲೀಸರ ಕೈಗೆ ಸಿಕ್ಕಿ ಬೀಳಲು ಇದೇ‌ ಕಾರು ಕಾರಣವಾಗಿ ಬಿಟ್ಟಿದೆ‌. ಅಜೇಂದ್ರ ಖರೀದಿಸಿದ್ದ ಹೊಸ ಕಾರಿನಲ್ಲಿ ಜಿಪಿಎಸ್ ವ್ಯವಸ್ಥೆ ಇದ್ದು ಮೊಬೈಲ್ ನಲ್ಲೇ ಕಾರು ಎಲ್ಲಿ ಇದೆ ಎಂದು ಕಂಡುಹಿಡಿಯಬಹುದಾದ ವ್ಯವಸ್ಥೆ ಇದಾಗಿದೆ. ಈ ವ್ಯವಸ್ಥೆ ಅನೂಪ್‌ ಗಮನಕ್ಕೆ ಇಲ್ಲದೇ ಇರುವುದರಿಂದ ಇದೇ ಕಾರಿನಲ್ಲಿ ಗೋವಾಕ್ಕೆ ತೆರಳಿದ್ದನು. ಆದರೆ ಪೊಲೀಸರು ಜಿಪಿಎಸ್ ವ್ಯವಸ್ಥೆಯ ಮೂಲಕ ಅರೋಪಿ ಇರುವ ಸ್ಥಳ ಪತ್ತೆ ಹಚ್ಚಿದ್ದಾರೆ ಎನ್ನುವ ಮಾಹಿತಿ ಕೆಲ ಮೂಲಗಳಿಂದ ತಿಳಿದುಬಂದಿದೆಯಾದರೂ ಈ ಬಗ್ಗೆ ನಿಖರ‌ ಮಾಹಿತಿ ಇಲ್ಲ.

ಕೊಲೆ ಪ್ರಕರಣದ ಆರೋಪಿ ಅನೂಪ್‌ನನ್ನು ಪೊಲೀಸರು ಶನಿವಾರವೇ ಗೋವಾದಲ್ಲಿ ಪರಾರಿಯಾಗಲು ಬಳಸಿದ್ದ ಕಾರು ಸಹಿತ ಸೆರೆ ಹಿಡಿದಿದ್ದರು. ಕೊಲೆ ಪ್ರಕರಣ ಸಂಬಂಧ ಪೊಲೀಸ್ ವಶದಲ್ಲಿರುವ ಅನೂಪ್‌ನ ವಿಚಾರಣೆ ಮುಂದುವರಿದಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆಂದು ತಿಳಿದುಬಂದಿದೆ.

Related Posts

Leave a Reply

Your email address will not be published.