ಕುಟುಂಬದ ಇಚ್ಛೆಯಂತೆ ಉಡುಪಿ ಶೋಕ ಮಾತಾ ದೇವಾಲಯಕ್ಕೆ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥೀವ ಶರೀರ ರವಾನೆ
ಉಡುಪಿ: ಅನಾರೋಗ್ಯಕ್ಕೆ ತುತ್ತಾಗಿ ಸೋಮವಾರ ಮಂಗಳೂರಿನ ಎನಾಪೋಯ ಆಸ್ಪತ್ರೆಯಲ್ಲಿ ನಿಧನರಾದ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥೀವ ಶರೀರ ಇಂದು ಬೆಳಗ್ಗೆ 9:15 ಕ್ಕೆ ಉಡುಪಿ ಶೋಕ ಮಾತಾ ದೇವಾಲಯಕ್ಕೆ ಆಗಮಿಸಲಿದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಸ್ಕರ್ ಅವರ ಕುಟುಂಬದ ಇಚ್ಛೆಯಂತೆ ಬೆಳಿಗ್ಗೆ 9:30 ಕ್ಕೆ ಪ್ರಾರ್ಥನಾ ವಿಧಿಗಳನ್ನು ಆರಂಭಿಸಲಿದ್ದು, ಬಲಿಪೂಜೆಯನ್ನು ಅರ್ಪಿಸಲಿದ್ದೇವೆ. ಬಳಿಕ ಅವರ ಪಾರ್ಥಿವ ಶರೀರವನ್ನು ಕಾಂಗ್ರೆಸ್ ಭವನಕ್ಕೆ ಕೊಂಡೊಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಆಸ್ಕರ್ ಫೆರ್ನಾಂಡಿಸ್ ಅವರು ಇದೇ ಶೋಕಾ ಮಾತಾ ದೇವಾಲಯಕ್ಕೆ ಸೇರಿದವರಾಗಿದ್ದು, ಅವರ ಮೂಲಮನೆ ಇದೇ ಚರ್ಚ್ ಗೆ ಒಳಪಟ್ಟಿದೆ. ಹೀಗಾಗಿ ಅವರ ಪಾರ್ಥೀವ ಶರೀರವನ್ನು ಪ್ರಥಮವಾಗಿ ಇಲ್ಲಿಗೆ ತರಲಾಗುತ್ತದೆ ಎಂದರು.