ನಂದಿಕೂರಿನ ದೇವರಕಾಡು ಪ್ರದೇಶ ನೆಲಸಮ: ಗ್ರಾ.ಪಂ.ಗೆ ತಪ್ಪು ಮಾಹಿತಿ ನೀಡಿದ ಕಂಪನಿ ಕಾಮಗಾರಿ ಸ್ಥಗಿತಕ್ಕೆ ಸೂಚನೆ

ನಂದಿಕೂರಿನ ದೇವರಕಾಡು ಪ್ರದೇಶವನ್ನು ನೆಲಸಮ ಮಾಡಿ ಕಾಮಗಾರಿ ನಡೆಸುತ್ತಿರುವ ಕಂಪನಿಯೊಂದು ಗ್ರಾ.ಪಂ.ಗೆ ತಪ್ಪು ಮಾಹಿತಿ ನೀಡಿ ತಮಗೆ ಬೇಕಾದಂತೆಲ್ಲಾ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನನ್ವಯ ಸಭೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಕಂಪನಿಗೆ ಪಲಿಮಾರು ಗ್ರಾ.ಪಂ. ಸೂಚನೆ ನೀಡಿದೆ.

ಅಡುಗೆ ಎಣ್ಣೆ ಕಂಪನಿ ಎಂಬುದಾಗಿ ಆಡಳಿತ ಸಮಿತಿ ಅಸ್ಥಿತ್ವದಲ್ಲಿ ಇಲ್ಲದ ವೇಳೆ ಆಡಳಿತಾಧಿಕಾರಿಯಿಂದ ಯಾವುದೇ ಪೂರಕ ಮಾಹಿತಿ ನೀಡದೆ ಅನುಮತಿ ಪತ್ರ ಪಡೆದ ಕಂಪನಿ, ಸಾರ್ವಜನಿಕ ಸಭೆ ಕರೆಯದೆ ಆ ಭಾಗದಲ್ಲಿದ್ದ ನೀರಿನ ತೊರೆ ಮುಚ್ಚಿದಲ್ಲದೆ, ಸಾರ್ವಜನಿಕರಿಗೆ ಸಮಸ್ಯೆಯೊಡ್ಡುವ ಬಹಳಷ್ಟು ಕಾಮಗಾರಿ ನಡೆಸುತ್ತಿದ್ದು ಈ ಬಗ್ಗೆ ಗ್ರಾಮಸ್ಥರಿಂದ ಬಂದ ಮಾಹಿತಿಯ ಮೇರೆಗೆ ಗ್ರಾ.ಪಂ., ನಂದಿಕೂರು ದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆ ಕರೆದಿದ್ದು ಸಭೆಯಲ್ಲಿದ್ದ ಕಂಪನಿಯ ಅಧಿಕಾರಿಗಳು ಸಹಿತ ಕಂಪನಿಗರ ಸ್ಥಳಾವಕಾಶ ನೀಡಿದ ಸುಜ್ಲಾನ್ ಅಧಿಕಾರಿಗಳು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೆ ಹಾಗೂ ಪೂರಕ ದಾಖಲೆ ಪತ್ರ ಒದಗಿಸಲಾಗದೆ ತಡವರಿಸಿದಾಗ ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆ ವೇಳೆ ಮಧ್ಯೆ ಪ್ರವೇಶಿಸಿದ ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಪ್ರಭು ಸಹಿತ ಅಭಿವೃದ್ಧಿ ಅಧಿಕಾರಿ ಸತೀಶ್ ತಕ್ಷಣವೇ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಕಂಪನಿ ಅಧಿಕಾರಿಗಳಿಗೆ ಸೂಚಿಸಿ, ಮುಂದಿನ ದಿನದಲ್ಲಿ ಸಾರ್ವಜನಿಕ ಸಭೆ ನಡೆಸಿ ತಮ್ಮ ಕಂಪನಿಯ ಬಗ್ಗೆ ಮಾಹಿತಿ ನೀಡಿ ಪೂರಕ ದಾಖಲೆ ನೀಡಿದ ಬಳಿಕ ಗ್ರಾ.ಪಂ. ಅನುಮತಿ ಪಡೆದು ಕಾಮಗಾರಿ ಮುಂದುವರಿಸುವಂತೆ ಸೂಚಿಸಿದ್ದಾರೆ.

 

Related Posts

Leave a Reply

Your email address will not be published.