ಬನ್ನೂರಿನಲ್ಲಿ ಕುಸಿದು ಬೀಳುವ ಹಂತದಲ್ಲಿರುವ ಮನೆ, ನೆರವಿನ ನಿರೀಕ್ಷೆಯಲ್ಲಿ ಬೀರ್ನಹಿತ್ಲುವಿನ ಬಡ ಮಹಿಳೆ

ಕೊರೊನಾ ಪಾಸಿಟೀವ್ ಪ್ರಕರಣಗಳು ರಾಜ್ಯಲ್ಲಿ ಕೊಂಚ ಇಳಿಮುಖವಾಗುತ್ತಿರುವ ನಡುವೆಯೇ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲೂ ಪ್ರಯತ್ನಗಳು ಆರಂಭಗೊಂಡಿದೆ. ಒಂದು ವೇಳೆ ಶಾಲೆ ಪ್ರಾರಂಭವಾದಲ್ಲಿ ತನ್ನ ಮಗುವಿಗೆ ಹೇಗೆ ಶಿಕ್ಷಣ ನೀಡಲಿ ಎನ್ನುವ ತಳಮಳದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಡ ತಾಯಿಯೊಬ್ಬರಿದ್ದಾರೆ. ಈಕೆಯ ಮನೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಕೂಲಿ-ನಾಲಿ ಮಾಡಿ ತನ್ನ ಅನಾರೋಗ್ಯ ಪೀಡಿತ ಮಗುವಿನೊಂದಿಗೆ ಬದುಕು ಸಾಗಿಸುತ್ತಿರುವ ಈ ವಿಧವೆ ಮಹಿಳೆಗೆ ಮಗಳಿಗೆ ಶಿಕ್ಷಣ ಕಲಿಸುವುದೋ, ಜೀವನ ಮಾಡುವುದೋ ಎನ್ನುವ ಗೊಂದಲವಿದೆ.

ಈಕೆ ಸುಂದರಿ, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೀರ್ನಹಿತ್ಲು ಎನ್ನುವ ಊರಿನ ನಿವಾಸಿ. ಕಳೆದ ಮೂರು ವರ್ಷಗಳಿಂದ ಮನೆಯ ಗೋಡೆಗಳಲ್ಲಿ ಬಿರುಕು ಬೀಳಲಾರಂಭಿಸಿದ್ದು, ಇದೀಗ ಮನೆಯು ವಾಸಿಸಲು ಅಯೋಗ್ಯವಾದ ಸ್ಥಿತಿಗೆ ಬಂದು ತಲುಪಿದೆ. ಸುಂದರಿ ಅವರ ಪತಿ ಹೃದಯಾಘಾತದಿಂದ ಸಾವನ್ನಪ್ಪಿ ವರ್ಷಗಳು ಕಳೆದಿದ್ದು, ಈಕೆ ತನ್ನ 10ವರ್ಷದ ಅನಾರೋಗ್ಯಪೀಡಿತ ಮಗಳು ಹಾಗೂ ಮೈದುನನೊಂದಿಗೆ ಮುರುಕಲು ಮನೆಯಲ್ಲೇ ಜೀವನ ಸಾಗಿಸುತ್ತಿದ್ದರು. ಮೈದುನವೂ ಅನಾರೋಗ್ಯದಿಂದ ಪೀಡಿತನಾಗಿದ್ದು, ಮಗಳು ಹಾಗೂ ಮೈದುನನ್ನು ಸಲಹುವ ಜವಾಬ್ದಾರಿ ಇದೀಗ ಈ ಬಡ ಮಹಿಳೆಯ ಮೇಲಿದೆ. ಆದರೆ ಇದೀಗ ಮನೆಯೂ ಬೀಳುವ ಹಂತಕ್ಕೆ ತಲುಪಿದ ಕಾರಣ ತನ್ನ ಮಗಳೊಂದಿಗೆ ತನ್ನ ತವರು ಮನೆಯಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಆದರೆ ತವರು ಮನೆ ಹಾಗೂ ಮಗಳು ಕಲಿಯುವ ಶಾಲೆಗೆ ಹತ್ತು ಕಿಲೋಮೀಟರ್ ಅಂತರವಿದ್ದು, ಇಲ್ಲಿಗೆ ಯಾವುದೇ ಸಂಪರ್ಕ ವ್ಯವಸ್ಥೆಯೂ ಇಲ್ಲ. ಅಟೋ ಮೂಲಕ ಸಂಪರ್ಕ ಸಾಧಿಸಬೇಕಾದರೆ ಹೋಗಿ ಬರಲು ದಿನಕ್ಕೆ 300 ರೂಪಾಯಿ ವೆಚ್ಚ ಮಾಡಬೇಕಿದೆ. ಬಸವ ಕಲ್ಯಾಣ ಯೋಜನೆಯ ಮೂಲಕ ಮನೆಗೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷಗಳು ಕಳೆದಿದ್ದರೂ, ಈವರೆಗೂ ಆ ಯೋಜನೆಯೂ ಕೈ ಸೇರಿಲ್ಲ. ಮನೆಯನ್ನು ರಿಪೇರಿ ಮಾಡಲು ಸಾಧ್ಯವೇ ಇಲ್ಲದಂತಹ ಸ್ಥಿತಿಯಲ್ಲಿರುವ ಕಾರಣ ಸ್ಥಳೀಯ ಗ್ರಾಮಪಂಚಾಯತ್ ಕೂಡಾ ಬಸವ ಕಲ್ಯಾಣ ಯೋಜನೆಯ ಮನೆಗಾಗಿಯೇ ಕಾಯುತ್ತಿದೆ. ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಸದ್ಯದಲ್ಲೇ ಆರಂಭಗೊಳ್ಳುವ ಸೂಚನೆ ದೊರೆತಲ್ಲಿಂದ ಈ ಬಡ ವಿಧವೆಗೆ ತನ್ನ ಮಗಳಿಗೆ ಹೇಗೆ ಶಿಕ್ಷಣ ನೀಡುವುದು ಎನ್ನುವ ತೊಳಲಾಟದಲ್ಲಿದ್ದಾರೆ. ಕೂಲಿ-ನಾಲಿ ಮಾಡಿ ಸಿಗುವ ದುಡ್ಡಿನಿಂದ ಮಗಳ ಶಿಕ್ಷಣ ಪೂರೈಸುವುದೋ, ಜೀವನ ಸಾಗಿಸುವುದೋ ಎನ್ನುವ ಗೊಂದಲವೂ ಈಕೆಯದ್ದಾಗಿದೆ.

ಸುಂದರಿಯವರ ಮನೆಗೆ ಸ್ಥಳೀಯ ಬನ್ನೂರು ಗ್ರಾಮಪಂಚಾಯತ್ ನ ಆಡಳಿತವರ್ಗ ಭೇಟಿ ನೀಡಿ ಈಗಾಗಲೇ ಪರಿಶೀಲನೆ ನಡೆಸಿದೆ. ಮನೆಯು ಸಂಪೂರ್ಣ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಈ ಪರಿಸ್ಥಿತಿಯಲ್ಲಿ ಮನೆಯನ್ನು ರಿಪೇರಿ ಮಾಡುವುದು ಸಾಧ್ಯವೇ ಇಲ್ಲ. ಈ ಕಾರಣಕ್ಕಾಗಿ ಬಸವ ಕಲ್ಯಾಣ ಯೋಜನೆಯ ಮೂಲಕ ಮನೆ ನಿರ್ಮಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸರಕಾರ ಈ ಯೋಜನೆ ನಾಲ್ಕು ವರ್ಷಗಳಾದರೂ , ಇನ್ನೂ ತಲುಪಿಲ್ಲ. ಸರಕಾರ ತಾಂತ್ರಿಕ ದೋಷಗಳನ್ನು ಪರಿಹರಿಸಿದ ತಕ್ಷಣವೇ ಆದ್ಯತೆಯ ಮೇರಿಗೆ ಸುಂದರಿಯವರಿಗೆ ಮನೆ ನೀಡುವ ಕೆಲಸ ಗ್ರಾಮಪಂಚಾಯತ್ ಮೂಲಕ ನಡೆಯಲಿದೆ. ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 10ಮಿಕ್ಕಿ ಈ ರೀತಿಯ ಮನೆಗಳಿದ್ದು, ಎಲ್ಲಾ ಮನೆಗಳಿಗೂ ಬಸವ ಕಲ್ಯಾಣ ಯೋಜನೆಯ ಮೂಲಕ ಮನೆ ನಿರ್ಮಿಸಲಾಗುವುದು ಎಂದು ಗ್ರಾಮಪಂಚಾಯತ್ ಸ್ಪಷ್ಟಪಡಿಸಿದೆ.

ಪರಿಶಿಷ್ಟ ಜಾತಿಗೆ ಸೇರಿದ ಸುಂದರಿ ತಾನು ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತವಾಗಿದ್ದರೂ, ತನ್ನ ಮಗಳು ಶಿಕ್ಷಣವನ್ನು ಪಡೆಯಬೇಕೆಂದು ಹೆಣಗಾಡುತ್ತಿದ್ದಾರೆ. ಆಪಸ್ಮಾರ ರೋಗದಿಂದ ಬಳಲುತ್ತಿರುವ ಮಗಳನ್ನು ಪ್ರತೀ ದಿನವೂ ಮನೆಯಿಂದ ಶಾಲೆಗೆ ಕರೆತರುವ ಜವಾಬ್ದಾರಿಯನ್ನು ಅತ್ಯಂತ ಕಷ್ಟವನ್ನು ಅನುಭವಿಸಿ ಮಾಡಿಕೊಂಡು ಬರುವ ಈ ಬಡ ವಿಧವೆಯ ಕಷ್ಟಕ್ಕೆ ಸರಕಾರ, ಸಂಘ-ಸಂಸ್ಥೆಗಳು ಕೂಡಲೇ ಸ್ಪಂದಿಸಬೇಕಿದೆ.

ಸಹಾಯ ಮಾಡಲು ಇಚ್ಚಿಸುವವರು:
ಸುಂದರಿ
ಯೂನಿಯನ್ ಬ್ಯಾಂಕ್
ಬೋಲ್ವಾರು
ಪುತ್ತೂರು.
ಅಕೌಂಟ್ ನಂಬರ್ :7022034093.
Ifsc code: UBIN0902241.

 

 

Related Posts

Leave a Reply

Your email address will not be published.