ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಂವಾದ ಕಾರ್ಯಕ್ರಮ

ಮಂಗಳೂರು ನಗರ ಪೊಲೀಸ್ ವತಿಯಿಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.

ಮಂಗಳೂರಿನ ಎಸ್.ಸಿ.ಡಿ.ಸಿಸಿ ಬ್ಯಾಂಕ್ ನ ಸಭಾಂಗಣದಲ್ಲಿ ನಗರ ಪೊಲೀಸ್ ವತಿಯಿಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಂವಾದ ಕಾರ್ಯಕ್ರಮವನ್ನ ನಡೆಸಲಾಯ್ತು. ಇನ್ನು ಕಾರ್ಯಕ್ರಮವನ್ನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಉದ್ಘಾಟಿಸಿದರು. ತದ ಬಳಿಕ ಮಾತನಾಡಿದ ಅವರು, ವೈಯುಕ್ತಿಕ ನೋವನ್ನು ಸಹಿಸಿಕೊಂಡು ಜನರಿಗೆ ರಕ್ಷಣೆ ನೀಡುವ ಪೊಲೀಸರ ಕೆಲಸದ ಮೇಲೆ ಅಪಾರ ಗೌರವವಿದೆ.ಹಿರಿಯ ಅಧಿಕಾರಿಗಳಿಂದ ಹಿಡಿದು ಕೆಳ ದರ್ಜೆಯ ಸಿಬ್ಬಂದಿ ತನಕ ಅವರಿಗಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಂವಾದ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣ ಎಂದು ಅವರು ಹೇಳಿದರು.ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಕಮಿಷನರೆಟ್ ವ್ಯಾಪ್ತಿಯಲ್ಲಿ ಸುಮಾರು ೨ ಸಾವಿರ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಠಾಣೆಗಳಲ್ಲಿ ಸಿಬ್ಬಂದಿಯ ಪ್ರತಿಭೆಯನ್ನು ಪರಿಗಣಿಸಿ ಅದಕ್ಕೆ ಪೂರಕವಾಗಿ ಠಾಣಾಧಿಕಾರಿಗಳು ಕರ್ತವ್ಯ ಹಂಚಿಕೆ ಮಾಡಿದಾಗ ಪರಿಣಾಮಕಾರಿ ಫಲಿತಾಂಶ ಪಡೆಯಲು ಸಾಧ್ಯ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮುಖ್ಯ ಅತಿಥಿಯಾಗಿದ್ದರು. ಡಿಸಿಪಿ ಚನ್ನವೀರಪ್ಪ ಹಡಪದ್, ಎಸಿಪಿ ರಂಜಿತ್ ಕುಮಾರ್ ಬಂಡಾರು, ಸಂಚಾರ ವಿಭಾಗದ ಎಸಿಪಿ ನಟರಾಜ್ ಉಪಸ್ಥಿತರಿದ್ದರು. ಕೇಂದ್ರ ಗೃಹ ಇಲಾಖೆಯಿಂದ ಚಿನ್ನದ ಪದಕ ಪಡೆದ ಕೇಂದ್ರ ಉಪವಿಭಾಗದ ಎಸಿಪಿ ಪಿ.ಎ.ಹೆಗ್ಡೆ, ಮುಖ್ಯಮಂತ್ರಿ ಪದಕ ಪಡೆದ ಬಂದರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ, ಸಿಸಿಬಿ ಹೆಡ್ ಕಾನ್‌ಸ್ಟೇಬಲ್ ಅಬ್ದುಲ್ ಜಬ್ಬಾರ್, ದಕ್ಷಿಣ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ನಯನಾ ಅವರನ್ನ ಗೌರವಿಸಲಾಯಿತು. ಕಾರ್ಯಕ್ರಮವನ್ನ ಆರ್.ಜೆ ಪ್ರಸನ್ನ ನಿರೂಪಿಸಿದರು.

Related Posts

Leave a Reply

Your email address will not be published.