ಸುಳ್ಯದ ಅರಮನೆ ಗಯಕ್ಕೆ ಬೇಕಾಗಿದೆ ತೂಗು ಸೇತುವೆ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮರ್ಕಂಜ ಮತ್ತು ಅರಂತೋಡು ಗ್ರಾಮಕ್ಕೆ ಸಂಬಂಧಪಟ್ಟ ಅರಮನೆ ಗಯ ಎಂಬಲ್ಲಿ ತೂಗು ಸೇತುವೆ ಮುರಿದು ಹೋಗಿದ್ದು ಸಂಚಾರಕ್ಕೆ ತೊಡಕುಂಟಾಗಿ ಅಲ್ಲಿನ ಜನತೆ ಸಂಕಷ್ಟಪಡುತ್ತಿದ್ದಾರೆ. 30 ವರ್ಷಗಳಿಂದ ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಒಂದು ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಎಷ್ಟು ಕೇಳಿದರು ಸ್ಪಂದನೆ ಇನ್ನೂ ಸಿಕ್ಕಿಲ್ಲ.
ಮರ್ಕಂಜ ಮತ್ತು ಅರಂತೋಡು ಗ್ರಾಮಗಳ ನಡುವೆ ಹಂಚಿಹೋಗಿರುವ ಅರಮನೆಗಯದ ನಡುವೆ ಹರಿಯುವ ಹೊಳೆ ಈ ಊರಿನ ಪ್ರಮುಖ ಶತ್ರು. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ ದಾಟಲಾರದೆ ಕಚ್ಚಾ ತೂಗುಸೇತುವೆಯಲ್ಲೇ ಇಲ್ಲಿನ ಜನರ ಓಡಾಟ ಸಾಗುತ್ತದೆ. ಮನೆಗೆ ರೇಷನ್, ದನಕರುಗಳಿಗೆ ಮೇವು, ಶಾಲಾ ಕಾಲೇಜುಗಳಿಗೆ ಹೋಗಲು, ಹೊರ ಊರಿನ ಪ್ರಯಾಣಕ್ಕೆ ಇದೇ ತೂಗುಸೇತುವೆ ಗತಿ. ಈ ಸೇತುವೆಯನ್ನೂ ಇಲ್ಲಿನ ಜನರೇ ವರ್ಷಕ್ಕೊಮ್ಮೆ ದುರಸ್ಥಿ ಮಾಡಿಕೊಳ್ಳಬೇಕು. ಮರ್ಕಂಜ ಗ್ರಾಮ ಪಂಚಾಯತ್ ಒಂದಿಷ್ಟು ದುರಸ್ತಿ ವೆಚ್ಚ ಕೊಟ್ಟರೆ ಅರಂತೋಡು ಪಂಚಾಯತ್ ನವರು ಇತ್ತ ಕಡೆ ತಿರುಗಿ ನೋಡುವುದಿಲ್ಲ.
ಅರಮನೆಗಯದಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಇಲ್ಲಿನ ಜನರದ್ದು ಬರೋಬ್ಬರಿ ಎರಡೂವರೆ ದಶಕಗಳ ಬೇಡಿಕೆ ಇದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಇಲ್ಲಿನ ಜನರಿಗೆ ಸೇತುವೆಯ ಮಹಾಪೂರ ಆಫರ್ ಗಳು ಬರುತ್ತವೆ. ಚುನಾವಣೆ ಕಳೆದ ಬಳಿಕ ಅದೇ ರಾಗ ಅದೇ ಹಾಡು. ಮತ್ತದೇ ಯಾತನಾಮಯ ಪಾಡು.