ಸೆ.27ರಿಂದ ಪುತ್ತೂರಿನ ಸೋಮವಾರ ಸಂತೆಗೆ ಚಾಲನೆ
ಪುತ್ತೂರು: ಕೋವಿಡ್ ಪ್ರಥಮ ಅಲೆಯಿಂದಾಗಿ ಒಂದು ವರ್ಷದ ಸ್ಥಗಿತಗೊಂಡು ಎ.26ಕ್ಕೆ ಪುನರಾರಂಭಗೊಂಡಿದ್ದರೂ, ಕೋವಿಡ್ 2ನೇ ಅಲೆಯಿಂದಾಗಿ ಮತ್ತೆ ಸ್ಥಗಿತಗೊಂಡಿದ್ದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುವ ಸೋಮವಾರ ಸಂತೆ ಇದೀಗ ಮತ್ತೆ ಜೀವ ಪಡೆದು ಕೊಂಡಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಕಡಿಮೆ ಮತ್ತು ವಾರಾಂತ್ಯದ ಕರ್ಫ್ಯೂ ತೆರವಾದ್ದರಿಂದ ಸೆ.27 ರಂದು ಕಿಲ್ಲೆ ಮೈದಾನದ ಸೋಮವಾರದ ಸಂತೆಗೆ ಚಾಲನೆ ಸಿಗಲಿದೆ.
ಕೋವಿಡ್ ಸೋಂಕು ಆರಂಭ ಆದ ಸಂದರ್ಭ ಕೋವಿಡ್ ಲಾಕ್‌ಡೌನ್ ಪರಿಣಾಮ 2020ರ ಎ.1ರಿಂದ ವಾರದ ಸಂತೆ ಪ್ರಾರಂಭಗೊಂಡಿರಲಿಲ್ಲ. 2021 ಮಾ.31ರ ತನಕವು ಸಂತೆ ತೆರೆದಿರಲಿಲ್ಲ. 2021ರ ಎ.26ಕ್ಕೆ ಸಂತೆ ಪುನರಾರಂಭಗೊಂಡರೂ ಎರಡೇ ವಾರದಲ್ಲಿ ಕೋವಿಡ್ 2ನೇ ಅಲೆಯ ಲಾಕ್‌ಡೌನ್ ಪರಿಣಾಮ ಮತ್ತೆ ಸಂತೆ ವ್ಯಾಪಾರ ಸ್ಥಗಿತಗೊಳಿಸಬೇಕಾಯಿತು.
ಇದೀಗ ಸೆ.27ಕ್ಕೆ ಕಿಲ್ಲೆ ಮೈದಾನದಲ್ಲಿ ಸಂತೆ ಪುನರಾರಂಭಗೊಳ್ಳಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ.