ತೇಲುವತ್ತ ತೇಲಿಗಳು

ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆದಿದೆ. ರಾಹುಲ್ ಗಾಂಧಿಯವರು ಒಂದು ಕಡೆ ಮಾತನಾಡುತ್ತ ಮೋದಿಯವರು ಓಬಿಸಿ ಇತರ ಹಿಂದುಳಿದ ವರ್ಗಕ್ಕೆ ಸೇರಿಲ್ಲ. ಅವರು ವೈಶ್ಯ ಸಾಮಾನ್ಯ ವರ್ಗಕ್ಕೆ ಸೇರಿದವರು ಎಂದು ಹೇಳಿದರು. ಇದನ್ನು ಬಿಜೆಪಿ ಅಲ್ಲಗಳೆದಿದೆ. ಆದರೆ ಇದು ಒಂದಷ್ಟು ಸತ್ಯ ಒಂದಷ್ಟು ಸುಳ್ಳನ್ನು ಒಳಗೊಂಡಿದೆ.

ತುಳುನಾಡಿನಲ್ಲಿ ಗಾಣಿಗರು ಇದ್ದಾರೆ. ಇವರು ಜನಿವಾರ ಧರಿಸುತ್ತಾರೆ. ಊರಿಗೆ ಎಣ್ಣೆ ತೆಗೆಯುವ ಗಾಣ ಹೊಂದಿರುವ ಜಾತಿಯವರು ಇವರು. ವೃತ್ತಿಯಲ್ಲಿ ಸೇವೆಯ ಶೂದ್ರರು. ಆದರೆ ವ್ಯಾಪಾರ ಮಾಡುವುದರಿಂದ ವೈಶ್ಯರು. ಹಳ್ಳಿ ಗಾಣಗಳು ಹೋದ ಮೇಲೆ ಅವರೆಲ್ಲ ವ್ಯಾಪಾರದಲ್ಲೇ ಈಡುಗೊಂಡಿದ್ದಾರೆ. ಸಪಲಿಗರು ಮೂಲ ತುಳುವರು. ಎಣ್ಣೆ ಮೂಲವನ್ನು ಉಳಿಸಿಕೊಂಡಿರುವ ಇವರು ದೇವಾಲಯಗಳಿಗೆ ಎಣ್ಣೆ ಒದಗಿಸುವವರು ಆಗಿದ್ದರು. ಭಾರತದಲ್ಲಿ ಎಣ್ಣೆ ತೆಗೆಯುವುದು ಕಸುಬಾದುದು. ದೊಡ್ಡ ದೇವಾಲಯಗಳಿಗೆ ನಿರಂತರ ಎಣ್ಣೆ ಒದಗಿಸುವ ಕಾಯಕದಿಂದ. ಅದಕ್ಕೆ ಮೊದಲು ಜನರು ತಮಗೆ ಬೇಕಾದ ಎಣ್ಣೆಯನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು.

ತುಳುನಾಡಿನಲ್ಲಿ 20ನೇ ಶತಮಾನದ ಮಧ್ಯ ಭಾಗದವರೆಗೆ ಕೆಲವರು ದೂಪ, ಹೊನ್ನೆ ಮಾದರಿಯ ಕೆಲವು ಎಣ್ಣೆಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳುತ್ತಿದ್ದರು. ಗಾಣದವರು ತೆಂಗಿನೆಣ್ಣೆ, ಎಳ್ಳೆಣ್ಣೆ, ಕಡಲೆಕಾಯಿ ಎಣ್ಣೆ ಮಾಡಿದಂತೆ ಹರಳೆಣ್ಣೆ ಮಾದರಿಯ ಎಣ್ಣೆಯನ್ನು ತೆಗೆದುಕೊಳ್ಳುತ್ತಿರಲಿಲ್ಲ. ದೂಪದ ಕಾಯಿ ಎಂದರೆ ತಂದೊಳಿಗೆ ಮರದ ಕಾಯಿ ಇಲ್ಲವೇ ಹೊನ್ನೆಯ ಅಡಗಳನ್ನು ಒಡೆದು ಒಲೆಯಲ್ಲಿ ಮಣ್ಣಿನ ಪಾತ್ರೆಯಲ್ಲಿ ಬೇಯಿಸುವುದು. ಆಗ ಎಣ್ಣೆ ಮೇಲೆ ಬರುತ್ತಿತ್ತು. ನೀರನ್ನು ತೀರಾ ಆರುವವರೆಗೆ ಒಯ್ದು ಎಣ್ಣೆ ತೋಡಿಕೊಳ್ಳುತ್ತಿದ್ದರು. ತುಳುವರು ದೂಪದ ಎಣ್ಣೆಯನ್ನು ಅಡುಗೆಗೂ ಬಳಸುತ್ತಿದ್ದರು. ಹೊನ್ನೆ ಎಣ್ಣೆಯನ್ನು ದೀಪಕ್ಕೆ ಬಳಸುತ್ತಿದ್ದರು. ಒಂದೂವರೆ ಶತಮಾನದ ಹಿಂದೆ ಸೀಮೆ ಇಲ್ಲವೇ ಚಿಮಣಿ ಎಣ್ಣೆ ಇರಲಿಲ್ಲ. ಸೀಮೆಯ ಆಚೆಯದು ಸೀಮೆ ಎಣ್ಣೆ. ಮಣ್ಣಿನ ಅಡಿಯಿಂದ ತೆಗೆಯುವುದರಿಂದ ಇದನ್ನು ಮಣ್ಣೆಣ್ಣೆ ಎಂದೂ ಹೇಳುತ್ತಾರೆ.

ಪ್ರಧಾನಿ ಮೋದಿಯವರು ಗುಜರಾತಿನ ತೇಲಿ ಜಾತಿ ವರ್ಗದ ಮೋದ್ ಗಾಂಚಿ ಉಪ ಜಾತಿಯವರು. ವೃತ್ತಿಯಿಂದ ವೈಶ್ಯರು, ಪ್ರವೃತ್ತಿಯಿಂದ ಶೂದ್ರರು. ತೇಲಿಗಳು ಭಾರತ, ಪಾಕಿಸ್ತಾನ, ನೇಪಾಳಗಳಲ್ಲಿ ಇದ್ದಾರೆ. ಮುಸ್ಲಿಂ ಸಮುದಾಯದ ತೇಲಿಗಳೂ ಇದ್ದಾರೆ. ಮುಸ್ಲಿಂ ತೇಲಿಗಳನ್ನು ರೋಶನ್ದಾರ್, ತೇಲಿ ಮಾಲಿಕ್ ಉಪ ನಾಮದಿಂದ ಕರೆಯುವರು. ನೇಪಾಳದ ತೇಲಿಗಳು ಮುಖ್ಯವಾಗಿ ಮಾದೇಶಿಗಳು. ಮಾದೇಶಿಗಳು ನೇಪಾಳದಲ್ಲಿ ತಮ್ಮ ಉದ್ಯೋಗದ ಹಕ್ಕಿಗಾಗಿ ಹೋರಾಡಿದ ಇತಿಹಾಸ ಇದೆ. ಆದರೆ ಈ ಜನಾಂಗ ಯಾವುದೋ ಒಂದು ಊರಿನಲ್ಲಿ ಹೆಚ್ಚು ಇದ್ದರೂ ಒಟ್ಟಾರೆ ಸಮಾಜದಲ್ಲಿ ಅವರ ಪ್ರಮಾಣ ಒಂದೆರಡು ಶೇಕಡಾ ಮೀರುವುದಿಲ್ಲ. ಗುಜರಾತನ್ನು ತೆಗೆದುಕೊಂಡರೆ ಅಲ್ಲಿನ ಬನಿಯಾ ವೈಶ್ಯರು ಎಲ್ಲ ವ್ಯಾಪಾರ ಹೊಂದಿರುವವರು. ತೇಲಿಗಳು ಅಡುಗೆ ಎಣ್ಣೆಯ ವ್ಯವಹಾರದಲ್ಲಿ ಮಾತ್ರ ತೊಡಗಿಕೊಂಡವರು ಎನ್ನಬಹುದು; ಈಗಲ್ಲ.

ಸಾಮ್ರಾಜ್ಯಗಳ ಕಾಲದಲ್ಲಿ ದೊಡ್ಡ ದೊಡ್ಡ ದೇವಾಲಯಗಳು ಸ್ಥಾಪನೆ ಆದವು. ಆಗ ದೇವಾಲಯ ಸೇವೆಗೆ ಹೊರಗಿನಿಂದ ನೇಮಕಗೊಂಡವರು ಹೂ ಮಾಲಿಗಳು ಮತ್ತು ಎಣ್ಣೆ ಸಪಲಿಗರು. ಒಂದು ದೊಡ್ಡ ಆಲಯಕ್ಕೆ ಎಣ್ಣೆ ಒಸಗಿಸುವುದು ಒಂದು ಕುಟುಂಬಕ್ಕೆ ಪೂರ್ಣ ಕೆಲಸ ಒದಗಿಸುತ್ತಿತ್ತು. ಈ ಪದ್ಧತಿ ತೆಂಕಣ ಭಾರತದ ಸಾಮ್ರಾಜ್ಯಗಳ ದೇವಾಲಯಗಳಿಂದ ಬಡಗಣ ಭಾರತದ ದೇವಾಲಯಗಳಿಗೆ ಹಬ್ಬಿತು ಎನ್ನಲಾಗಿದೆ. ಮನೆ ಮನೆಗಳಲ್ಲಿ ಎಣ್ಣೆ ತೆಗೆಯುವುದು ಕಡಿಮೆ ಆಗಿ ಸಾವಿರ ವರುಷದ ಹಿಂದೆ ಊರಿಗೊಬ್ಬರಾದರೂ ಗಾಣ ಹೊಂದಿರುವುದು ಕಂಡು ಬಂತು. ದೇವಾಲಯ ಸೇವೆಯಿಂದ ಇವರ ವೃತ್ತಿ ಮೊದಲುಗೊಂಡುದರಿಂದ ಜನಿವಾರ ಧರಿಸುವುದು ಬಹುತೇಕ ಇವರಲ್ಲಿ ಬಳಕೆಗೆ ಬಂದಂತೆ ಕಾಣುತ್ತದೆ. ಆದರೆ ಊರಲ್ಲಿ ಅವರ ಮಟ್ಟ ಶೂದ್ರರನ್ನು ಮೀರಿದಂತೆ ಕಾಣುವುದಿಲ್ಲ. ಇನ್ನು ಕೃಷ್ಣನಂತೂ ಭಗವದ್ಗೀತೆಯಲ್ಲಿ ವೈಶ್ಯರು ಶೂದ್ರರಂತೆ ಪಾಪ ಯೋನಿಜರು, ದುಡಿಯಬೇಕಾದವರು ಎಂದಿದ್ದಾನೆ. ಈ ಸಾಮಾಜಿಕ ಅಂಶವು ಭಗವದ್ಗೀತೆ ಪುರಾತನ ರಚನೆ ಅಲ್ಲ ಎಂದು ಪುಷ್ಟೀಕರಿಸಲು ಇರುವ ಒಂದು ಅಂಶವಾಗಿದೆ. ಹೊರಗಿನಿಂದ ಎಣ್ಣೆ ಒದಗಿಸುವ ಗಾಣಿಗರು ಸವರ್ಣೀಯರಲ್ಲ ಎಂಬುದನ್ನು ತಿಳಿಸಲು ಈ ಅಂಶ ಗೀತೆಯಲ್ಲಿ ಬಂದಿರಬಹುದು.

ಬ್ರಿಟಿಷರ ಕಾಲದಲ್ಲಿ ತೇಲಿಗಳು ತಾವು ಉತ್ತಮ ವರ್ಗದವರು ಎಂದು ತೀರಿಸಿಕೊಳ್ಳಲು ಪ್ರಯತ್ನಿಸಿದ್ದುಂಟು. ಪೆÇ್ರಫೆಸರ್ ಎಂ. ಎನ್. ಶ್ರೀನಿವಾಸ್ ಪ್ರಕಾರ 1911ರ ಜನಗಣತಿಯಲ್ಲಿ ತೇಲಿಗಳಲ್ಲಿ ಕೆಲವರು ತೇಲಿ ರಾಥೋಡ್ ಎಂದು ಬರೆಯಲಾರಂಭಿಸಿದರು. ಕೆಲವರು ಗುಪ್ತ ಆದರು. ಆದರೆ ಈ ಉಪನಾಮಗಳು ನಾನಾ ಜಾತಿಗಳಲ್ಲಿ ಇರುವುದರಿಂದ ನೇರವಾಗಿ ಅವರನ್ನು ಕ್ಷತ್ರಿಯ ವರ್ಗಕ್ಕೆ ಸೇರಿಸಲಿಲ್ಲ. ತೇಲಿಗಳಲ್ಲಿ ಸಾಹು, ಶಾಹ, ಪ್ರಧಾನ್, ಬೆಹ್ರಾ, ಮಂಡಲ್, ಕರ್ಪೆ, ಬೇಲೆ, ಮಾದು ಎಂದು ಕಾಲು ಶತಕ ಮೀರಿ ಉಪ ನಾಮಗಳು ಇವೆ. ಬ್ರಿಟಿಷರ ಕಾಲದಲ್ಲಿ ಮೇಲು ವರ್ಗಕ್ಕೆ ಸೇರಲು ಪ್ರಯತ್ನಿಸಿದ ತೇಲಿಗಳು ಸ್ವತಂತ್ರ ಭಾರತದಲ್ಲಿ ಮೀಸಲಾತಿ ಕಾರಣಕ್ಕೆ ಕೆಳ ಜಾತಿಗೆ ಸೇರಲು ಪ್ರಯತ್ನಿಸಿದರು.

ಇದು ಸಫಲವಾದುದು ಮಂಡಲ್ ಚಳವಳಿಯ ಕಾಲಕ್ಕೆ. 1989ರಲ್ಲಿ ಬಿಹಾರದಲ್ಲಿ ಬಹು ಮಟ್ಟಿಗೆ ಮಂಡಲ್ ವರದಿ ಜಾರಿಗೆ ಬಂತು. ಅದರಂತೆ ಓಬಿಸಿಯನ್ನು ಉನ್ನತ ಕೆಳ ಎಂದು ಎರಡಾಗಿ ಒಡೆಯಲಾಯಿತು. ಕಾನು, ದಾನುಕ್, ಕಹಾರ್ ಜಾತಿಗಳ ಜೊತೆಗೆ ತೇಲಿ ಜನರನ್ನು ಓಬಿಸಿಯಲ್ಲಿ ಅತಿ ಹಿಂದುಳಿದ ಜಾತಿಯವರು ಎಂದು ಪಟ್ಟಿ ಮಾಡಿತು. ಅದನ್ನು ಮುಂದೆ ಸ್ವಲ್ಪ ಮಟ್ಟಿಗೆ ಕೇಂದ್ರ ಒಪ್ಪಿತು. ವಾಜಪೇಯಿ ಪ್ರಧಾನಿ ಇದ್ದಾಗ 2000ದಲ್ಲಿ ಅದು ದೇಶ ಮಟ್ಟದ ಅಂಗೀಕಾರ ಪಡೆಯಿತು ಎನ್ನಬಹುದು. ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿ ಅದನ್ನೇ ಮಾಡಿದರು. ಇದಕ್ಕೆ ಜಾರ್ಖಂಡ್ ಉದಾಹರಣೆ ಕೊಡಬಹುದು. 2018ರಲ್ಲಿ ಜಾರ್ಖಂಡ್‍ನಲ್ಲಿ ಬಿಜೆಪಿ ಸರಕಾರ ಇದ್ದಾಗ ಸಂಘ ಪರಿವಾರದ ಜೈ ಆದಿವಾಸಿ ಯುವಶಕ್ತಿ ಎಂಬ ಸಂಘಟನೆ ಆರಂಭವಾಯಿತು. ಆ ಸಂಘಟನೆಯು ತೇಲಿಗಳನ್ನು ಎಸ್‍ಟಿ- ಬುಡಕಟ್ಟು ವರ್ಗಕ್ಕೆ ಸೇರಿಸಲು ಚಳವಳಿ ನಡೆಸಿತ್ತು.

ಬ್ರಿಟಿಷರ ಕಾಲದಲ್ಲಿ ಆರ್ಯ ಸಮಾಜ ಏರುಮುಖ ಇದ್ದಾಗ ತೇಲಿಗಳನ್ನು ಉನ್ನತ ಜಾತಿ ಎಂದು ಮೇಲೆತ್ತುವ ಪ್ರಯತ್ನ ನಡೆಯಿತು. ಆರ್ಯ ಸಮಾಜದ ಸತ್ಯವ್ರತ ಶರ್ಮಾರು ತೇಲಿ ವರ್ಣಪ್ರಕಾಶ ಎಂಬ ಪತ್ರಿಕೆ ನಡೆಸಿದರು. ಅದರಲ್ಲಿ ಅವರು ತೇಲಿಗಳು ಉನ್ನತ ವೈಶ್ಯರು ಎನ್ನುವುದಕ್ಕೆ ಒತ್ತು ಕೊಟ್ಟಿದ್ದರು. ವೇದ ಓದಿದವರು ಎನ್ನಲಾದ ಅವರು ಭಗವದ್ಗೀತೆ ಓದಿಲ್ಲ ಎನಿಸುತ್ತದೆ. ಬ್ಯಾಂಕುಗಳಿಗೆ ಟೋಪಿ ಹಾಕಿ ಪರಾರಿಯಾಗಿರುವ ನೀರವ್ ಮೋದಿಯವರ ಕುಟುಂಬ ವಜ್ರದ ವ್ಯಾಪಾರ ಮಾಡುತ್ತಿತ್ತು. ಐಪಿಎಲ್ ಮಾಲಿಕ ಲಲಿತ್ ಮೋದಿ ಕುಟುಂಬವು ಗುಜರಾತಿನಿಂದ ಮೀರತ್‍ಗೆ ಹೋಗಿತ್ತು. ಅಲ್ಲಿ ಅವರ ಪ್ರದೇಶ ಮೋದಿ ನಗರ ಆಗಿದೆ.

ಈಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ. ಆರ್. ಗವಾಯಿಯವರು ಐಎಎಸ್, ಐಪಿಎಸ್ ಆದವರ ಮಕ್ಕಳಿಗೂ ಮೀಸಲಾತಿ ಬೇಕೆ ಎಂಬ ಪ್ರಶ್ನೆ ಎತ್ತಿದ್ದಾರೆ. ಸಾಕಷ್ಟು ಮೇಲುಜಾತಿ ಜನರು ನಕಲಿ ಜಾತಿ ಪತ್ರದ ಮೂಲಕ ಕೆಲಸ ಪಡೆದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಅರ್ಧ ಶತಮಾನದ ಹಿಂದೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಒಬ್ಬರು ಜನಿವಾರ ಕಳಚಿ ಮೀಸಲಾತಿಯಿಂದ ಬಂದಿದ್ದರು. ಅವರು ನಿವೃತ್ತರಾದ ಮೇಲೆ ಆ ಪ್ರಕರಣ ಗೋವಿಂದ ಆಯಿತು. ಕೆಲವು ಮೇಲು ಜಾತಿಯವರು ತಮ್ಮ ಜಾತಿ ಉಪನಾಮದ ಮೂಲಕ ಈಗಲೂ ದಲಿತರ ಮೀಸಲ ಕಬಳಿಸುತ್ತಿದ್ದಾರೆ ಎಂಬ ದೂರು ಸತತ ಇದೆ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.