“90 ಬಿಡಿ ಮನೀಗ್ ನಡಿ” ಸಿನಿಮಾ ಜೂನ್ 29ರಿಂದ ರಾಜ್ಯಾದ್ಯಂತ ಬಿಡುಗಡೆ

ಕುಂದಾಪುರದ ನಾಗರಾಜ್ ಅರೆಹೊಳೆ ನಿರ್ದೇಶನದ ಅಮ್ಮ ಟಾಕೀಸ್ ಬಾಗಲಕೋಟ ಸಂಸ್ಥೆಯಡಿ ರತ್ನಮಾಲಾ ಬಾದರದಿನ್ನಿ ನಿರ್ಮಿಸುತ್ತಿರುವ “90 ಬಿಡಿ ಮನೀಗ್ ನಡಿ” ಚಿತ್ರ ಜೂನ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಇದಾಗಿದ್ದು, ಚಿತ್ರದಲ್ಲಿ ವಿಭಿನ್ನ ಗೆಟಪ್ಗಳ ಮೂಲಕ ಈಗಾಗಲೇ ಸುದ್ದಿಯಲ್ಲಿದ್ದಾರೆ. ಕ್ರೈಂ ವರದಿಗಾರರಾಗಿ ಪತ್ರಿಕೆ ಮತ್ತು ವಾಹಿನಿಗಳಲ್ಲಿ ಕೆಲಸ ಮಾಡಿರುವ ಕುಂದಾಪುರ ಮೂಲದ ಪತ್ರಕರ್ತ ನಾಗರಾಜ್ ಅರೆಹೊಳೆ ನಿರ್ದೇಶನವಿರುವ ನೈಂಟಿ ಬಿಡಿ ಮನೀಗ್ ನಡಿ ಚಿತ್ರ ಕಾಮಿಡಿ ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಜೂನ್ 29ರಂದು ರಾಜ್ಯಾದ್ಯಂತ ‘ನೈಂಟಿ ನಶೆ’ ಏರಿಸಲು ಸಜ್ಜಾಗಿದೆ.
ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶಿಸಿರುವ 90ಯಲ್ಲಿ ಧರ್ಮ,ಕರಿಸುಬ್ಬು, ಪ್ರಶಾಂತ್ ಸಿದ್ದಿ, ನೀತಾ ಮೈಂದರ್ಗಿ, ಪ್ರೀತು ಪೂಜಾ, ಬಿರಾದಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕೃಷ್ಣ ನಾಯ್ಕರ್ ಛಾಯಾಗ್ರಹಣ, ಯುಡಿವಿ ವೆಂಕಟೇಶ್ ಸಂಕಲನ, ರಾಕಿ ರಮೇಶ್ ಸಾಹಸವಿರುವ 90ಗೆ ಕಿರಣ್ ಶಂಕರ್ ಮತ್ತು ಶಿವು ಭೇರಗಿ ಸಂಗೀತ ನಿರ್ದೇಶನವಿದೆ.

ಈಗಾಗಲೇ ಚಿತ್ರದ ಎರಡು ಹಾಡು ಬಿಡುಗಡೆ ಕಂಡು ಜನಮನ ರಂಜಿಸಿವೆ. ವಿಶೇಷವಾಗಿ ಉತ್ತರ ಕರ್ನಾಟಕ ಶೈಲಿಯ “ಸಿಂಗಲ್ ಕಣ್ಣಾ ಹಾರಸ್ತಿ ಡಬ್ಬಲ್ ಹಾರನ್ ಬಾರಸ್ತಿ..” ಎಂಬ ಕಚಗುಳಿ ಇಡುವ ಹಾಡು ಸಖತ್ ಸದ್ದಾಗಿದೆ. ಇತ್ತಿಚೆಗೆ ಬಿಡುಗಡೆಯಾದ ಟ್ರೈಲರ್ ಕೂಡ ಸದ್ದು ಮಾಡುತ್ತಿದ್ದು, ನೈಂಟಿ ಕಿಕ್ ಏರಿಸುವ ಜೊತೆಗೆ ಥ್ರಿಲ್ ಕೊಡುವ ಕಂಟೆಂಟ್ ಚಿತ್ರ ಎಂಬಂತೆ ಟ್ರೈಲರ್ ಕಟ್ಟಿಕೊಡಲಾಗಿದೆ.
ಈ ಹಿಂದೆ ಹಾರೋ ಹಕ್ಕಿ, ಕೀಟ್ಲೇ ಕೃಷ್ಣ ಎಂಬ ಎರಡು ಮಕ್ಕಳ ಚಿತ್ರ ನಿರ್ದೇಶಿಸಿದ್ದ ನಾಗರಾಜ್ ಅರೆಹೊಳೆ ಇದೀಗ ಎಪ್ಪತ್ತು ವರ್ಷದ ಬಿರಾದಾರ್ ಜೊತೆ ಪ್ರಯೋಗಾತ್ಮಕ ಚಿತ್ರ ಮಾಡಿದ್ದಾರೆ. ‘ಕನಸೆಂಬೋ ಕುದುರೆಯನೇರಿ’ ಚಿತ್ರದಲ್ಲಿನ ಮನೋಜÐ ಅಭಿನಯಕಾಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಬಿರಾದಾರ್ ಅವರು ನೈಂಟಿ ಚಿತ್ರದಲ್ಲಿ ಸಖತ್ ಆಕ್ಟಿವ್ ಆಗಿ ಕಾಣಿಸಿಕೊಂಡಿದ್ದು ಚಿತ್ರದ ಮೇಲೊಂದು ನಿರೀಕ್ಷೆ ಇಡುವಂತಾಗಿದೆ.
ಒಟ್ಟಿನಲ್ಲಿ ಯಾವ ದೊಡ್ಡ ಸ್ಟಾರ್ ಸಿನಿಮಾಗಳು ಇಲ್ಲದ ಸಮಯಕ್ಕೆ ಐನೂರು ಚಿತ್ರಗಳ ಸರದಾರ ಬಿರಾದಾರ್ “ನೈಂಟಿ” ಹೊತ್ತು ತಂದಿದ್ದು, ಥೀಯೇಟರ್ ನಲ್ಲಿ ಇದೇ 29ರ ಗುರುವಾರದಿಂದ ಅದೃಷ್ಟ ಪರೀಕ್ಷೆ ನಡೆಯಲಿದೆ..