ಅಡ್ಯನಡ್ಕ : ಪ್ರಿಂಟಿಂಗ್ ಪ್ರೆಸ್ ಮಾಲಕ ಬಾವಿಗೆ ಬಿದ್ದುಆತ್ಮಹತ್ಯೆ
ಪುತ್ತೂರು:ಅಡ್ಯನಡ್ಕದಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿ ವ್ಯವಹಾರ ನಿರ್ವಹಿಸುತ್ತಿದ್ದ ಪುತ್ತೂರು ಪೋಳ್ಯ ನಿವಾಸಿಯೊಬ್ಬರು ಮನೆ ಸಮೀಪದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.16ರಂದು ಬೆಳಕಿಗೆ ಬಂದಿದೆ.
ಅಡ್ಯನಡ್ಕದಲ್ಲಿ ಅನುಗ್ರಹ ಪ್ರಿಂಟಿಂಗ್ ಪ್ರೆಸ್ ಹೊಂದಿರುವ ಪೋಳ್ಯ ನಿವಾಸಿ ಪದ್ಮಯ್ಯ ಗೌಡ(50ವ)ರವರು ಮೃತಪಟ್ಟವರು.ಪೋಳ್ಯ ದಿ.ಲಿಂಗಪ್ಪ ಗೌಡ ಅವರ ಪುತ್ರ ಪದ್ಮಯ್ಯ ಗೌಡ ಅವರು ಆರಂಭದಲ್ಲಿ ಪುತ್ತೂರಿನಲ್ಲಿ ಹುಸೈನ್ ಅವರ ಮಾಲಕತ್ವದ ಕೆನರಾ ಪ್ರಿಂರ‍್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದರು.ಆ ಬಳಿಕ ಅಡ್ಯನಡ್ಕದಲ್ಲಿ ಅನುಗ್ರಹ ಪ್ರಿಂಟಿಂಗ್ ಪ್ರೆಸ್ ಆರಂಭಿಸಿ, ಅಲ್ಲೇ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು.
ವಾರಕ್ಕೊಮ್ಮೆ ಪುತ್ತೂರು ಪೋಳ್ಯ ಮನೆಗೆ ಬರುತ್ತಿದ್ದರು.ಅವರ ಪತ್ನಿ ವಿನೋದಾ ಅವರು ಸಂಪಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡಿಕೊಂಡಿದ್ದು ಆ.12ರಂದು ಪದ್ಮನಾಭ ಅವರು ಪತ್ನಿ ವಿನೋದಾ ಅವರ ತಾಯಿ ಮನೆ ಕೋಡಿಂಬಾಡಿಗೆ ಹೋಗಿದ್ದರು.ಆ.13ರಂದು ಅಲ್ಲಿಂದ ಹೊರಡುವಾಗ, ತಾನು ಸೋಮವಾರ ಅಡ್ಯನಡ್ಕದಿಂದ ಪೋಳ್ಯ ಮನೆಗೆ ಹೋಗುವುದಾಗಿ ಪತ್ನಿಗೆ ತಿಳಿಸಿದ್ದರು.ಅದರಂತೆ ವಿನೋದಾ ಅವರು ಬಾವ ಕೃಷ್ಣಪ್ಪ ಗೌಡರಿಗೆ ಕರೆ ಮಾಡಿ, ನನ್ನ ಗಂಡ ಸೋಮವಾರ ಪೋಳ್ಯ ಮನೆಗೆ ಬರುತ್ತಾರಂತೆ ಎಂದು ತಿಳಿಸಿದ್ದರು.ಆದರೆ ಸೋಮವಾರ ಪದ್ಮಯ್ಯ ಗೌಡ ಮನೆಗೆ ಬಾರದೇ ಇದ್ದುದರಿಂದ ಕೃಷ್ಣಪ್ಪ ಗೌಡರು ವಿನೋದಾ ಅವರಿಗೆ ಕರೆ ಮಾಡಿ ವಿಚಾರಿಸಿದ್ದರು.
ಈ ನಡುವೆ ಪದ್ಮಯ್ಯ ಗೌಡ ಅವರ ಫೋನ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸದೇ ಇದ್ದುದು ಅನುಮಾನಕ್ಕೆ ಕಾರಣವಾಯಿತು.ಆ.14ರಂದು ಬೆಳಿಗ್ಗೆ ಪೋಳ್ಯ ಮನೆಯ ರಸ್ತೆ ಬದಿ ಪದ್ಮಯ್ಯ ಗೌಡರ ಸ್ಕೂಟರ್ ಇರುವುದು ಕಂಡು ಬಂತು.ಸಂಶಯ ಬಲಗೊಂಡು ಅವರ ಫೋನ್‌ಗೆ ಕರೆ ಮಾಡಿದಾಗ ಫೋನ್ ರಿಂಗಣಿಸಿತು.ಇದರ ಜಾಡು ಹಿಡಿದು ಹೋದಾಗ ಮನೆ ಸಮೀಪ ಬೇರೊಬ್ಬರ ತೋಟದ ಬಾವಿಯ ಕಟ್ಟೆಯಲ್ಲಿ ಪದ್ಮಯ್ಯ ಗೌಡರ ಬಟ್ಟೆ ಬರೆಗಳಿರುವುದು ಕಂಡು ಬಂತು.ಅದೇ ಬಾವಿಯಲ್ಲಿ ಹುಡುಕಾಡಿದಾಗ ಪದ್ಮಯ್ಯ ಗೌಡರ ಮೃತದೇಹ ಪತ್ತೆಯಾಗಿತ್ತು.ಘಟನೆಗೆ ಸಂಬಂಧಿಸಿ ಪದ್ಮಯ್ಯ ಗೌಡರ ಪತ್ನಿ ವಿನೋದ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರು ಪತ್ನಿ ವಿನೋದಾ, ಪುತ್ರಿ ಅನುಶ್ರೀ, ಮೂವರು ಸಹೋದರರು, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.