ಶತಮಾನೋತ್ಸವ ಸಂಭ್ರಮದಲ್ಲಿರುವ ಕುಳೂರು ಶಾಲೆಯಲ್ಲಿ ಸ್ಮರಣೀಯ ಸ್ವಾತಂತ್ರ್ಯೋತ್ಸವದ ಆಚರಣೆ
ದೇಶದ ಐಕ್ಯತೆಯನ್ನು ಒಂದೇ ಸೂರಿನಡಿಯಲ್ಲಿ ತರುವ ಭಾರತದ ಅಭಿಮಾನದ ಆಚರಣೆಯಾದ 77 ನೇ ಸ್ವಾತಂತ್ರ್ಯೋತ್ಸವವನ್ನು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಶತಮಾನೋತ್ಸವವನ್ನು ಆಚರಿಸುತ್ತಿರುವ ಕುಳೂರು ಶಾಲೆಯಲ್ಲಿ ಈ ವರ್ಷದ ಸ್ವಾತಂತ್ರ್ಯೋತ್ಸವವು ಸ್ಮರಣೀಯವಾಯಿತು. ಆಕರ್ಷಕ ಮೆರವಣಿಗೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಬಳಿಕ ಶಾಲಾ ಶತಮಾನೋತ್ಸವ ಸಮಿತಿಯವರು ಕೊಡುಗೆ ನೀಡಿದ ನೂತನ ಧ್ವಜಸ್ತಂಭದ ಲೋಕಾರ್ಪಣೆ ಮಾಡಲಾಯಿತು. ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲರವರು ನೂತನ ಧ್ವಜಸ್ತಂಭವನ್ನು ಅನಾವರಣಗೊಳಿಸಿದರು. ಬಳಿಕ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿಯವರು ಧ್ವಜಾರೋಹಣ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಎಕ್ಸ್ಪರ್ಟ್ ಕಾಲೇಜು ಮಂಗಳೂರಿನ ಪ್ರಾಧ್ಯಾಪಕರಾದ ಶ್ರೀ ಬಾಲಕೃಷ್ಣ ಶೆಟ್ಟಿ ಎ ಎಲಿಯಾಣ, ಶಾಲಾ ಶತಮಾನೋತ್ಸವದ ಹಣಕಾಸು ಸಮಿತಿಯ ಅಧ್ಯಕ್ಷರಾದ ಶ್ರೀ ಪಿ. ಆರ್. ಶೆಟ್ಟಿ ಪೊಯ್ಯೇಲ್, ಅತಿಥಿ ಸತ್ಕಾರ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲ್, ಸನ್ಮಾನ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ನೈಕ್ ನಡುಹಿತ್ಲು, ಆರೋಗ್ಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕೃಷ್ಣವೇಣಿ ಪಾದೆ ಕುಳೂರು, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಪಿ, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚರಿತ ಚಿನಾಲ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರಾ ಕಲ್ಕಾರ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶಾಲಾ ಶತಮಾನೋತ್ಸವದ ಸವಿ ನೆನಪಿಗಾಗಿ ವಿವಿಧ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ದೊಡ್ಡ ಕಪಾಟನ್ನು ಶ್ರೀ ಬಾಲಕೃಷ್ಣ ಶೆಟ್ಟಿ ಎ ಎಲಿಯಾಣ, ವಾಟರ್ ಪ್ಯೂರಿಫಯರನ್ನು ಶ್ರೀ ದಿನೇಶ್ ಶೆಟ್ಟಿ ಕುಳೂರು ಪಾದೆ, ತಲಾ ಎರಡರಂತೆ ಸೀಲಿಂಗ್ ಫ್ಯಾನ್ ಗಳನ್ನು ಶ್ರೀ ರಂಜಿತ್ ಕುಮಾರ್ ಕರಿಪ್ಪಾರ್ ಕುಳೂರು, ಶ್ರೀ ರಾಜೇಶ್ ಶೆಟ್ಟಿ ಅಂಗಡಿದಾರು ಹಾಗೂ ಶ್ರೀ ಯತೀಶ್ ಶೆಟ್ಟಿ ಎಲಿಯಾಣ ರವರು ನೀಡಿದರು. ನೂತನ ಧ್ವಜಸ್ತಂಭಕ್ಕೆ ಕಂಬದ ವ್ಯವಸ್ಥೆಯನ್ನು ಮೀಯಪದವಿನ ಸಿಟಿ ಹಾರ್ಡ್ ವೇರ್ ನ ಶ್ರೀ ಅಶ್ರಫ್ ಒದಗಿಸಿದರು. ಲಘು ಉಪಹಾರದ ವ್ಯವಸ್ಥೆಯನ್ನು ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲ್ ಹಾಗೂ ಶ್ರೀ ನಾರಾಯಣ ನೈಕ್ ನಡುಹಿತ್ಲು ಮಾಡಿದರು. ಮಕ್ಕಳ ಬಹುಮಾನದ ಪ್ರಾಯೋಜಕತ್ವವನ್ನು ಶಾಲಾ ಶತಮಾನೋತ್ಸವ ಸಮಿತಿ ವಹಿಸಿತ್ತು. ದಾನಿಗಳಿಗೆ ಶಾಲಾ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಎಂ ವಂದಿಸಿದರು. ಶಾಲಾ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು. ಶಾಲಾ ಶತಮಾನೋತ್ಸವ ಸಮಿತಿಯ ಸದಸ್ಯರು ಹಾಗೂ ಶಿಕ್ಷಕ ವೃಂದ ಸಹಕರಿಸಿದರು.