ದ್ವೀಪದಲ್ಲಿ ಮತ್ತೆ ವಿಜೃಂಭಿಸಲಿರುವ ಕರಾವಳಿಯ ಗಂಡು ಕಲೆ
ಬಹರೈನ್: ಯಕ್ಷಗಾನಕ್ಕೂ ಹಾಗು ಬಹರೇನ್ ದ್ವೀಪ ರಾಷ್ಟ್ರಕ್ಕೂ ಸುಮಾರು ನಾಲ್ಕು ದಶಕಗಳ ಅವಿನಾಭಾವ ಸಂಭಂದವಿದೆ. ಪ್ರಪ್ರಥಮವಾಗಿ ಯಕ್ಷಗಾನವನ್ನು ಸೀಮೋಲಂಘನ ಮಾಡಿಸಿದ ಕೀರ್ತಿಯ ಜೊತೆಗೆ ಸಂಪೂರ್ಣ ಹಿಮ್ಮೇಳ ಮುಮ್ಮೇಳವನ್ನು ಹಿಒಂದಿರುವ ಕೀರ್ತಿ ಕೂಡ ಬಹರೈನ್ ದ್ವೀಪ ರಾಷ್ಟ್ರಕ್ಕೆ ಸಲ್ಲುತ್ತದೆ. ಹಾಗಾಗಿ ದ್ವೀಪ ರಾಷ್ಟ್ರದಲ್ಲಿ ಆಗಾಗ್ಗೆ ಅಲ್ಲಲ್ಲಿ ಲಯಬದ್ಧವಾದ ಚೆಂಡೆಯ ಸದ್ದು ಕೇಳಿಸುತ್ತಲೇ ಇರುತ್ತದೆ. ದ್ವೀಪ ರಾಷ್ಟ್ರ ಬಹರೈನ್‍ನಲ್ಲಿ ಮತ್ತೆ ಕರಾಳಿಯ ಗಂಡು ಕಲೆ ಯಕ್ಷಗಾನ ವಿಜೃಂಭಿಸಲಿದೆ.
ಸೆಪ್ಟೆಂಬರ್ 9ರ ಶುಕ್ರವಾರದಂದು ಸಂಜೆ ರೋಯಲ್ ತುಳುಕೂಟ ಬಹರೈನ್ ಇಲ್ಲಿನ ಇಂಡಿಯನ್ ಕ್ಲಬ್ಬಿನ ಆಶ್ರಯದಲ್ಲಿ “ರೋಯಲ್ ಯಕ್ಷ ಐಸಿರಿ ” ಕಾರ್ಯಕ್ರಮವು ಆಯೋಜಿಸಿದೆ. ಸೆಪ್ಟೆಂಬರ್ 9ರ ಶುಕ್ರವಾರದಂದು ಸಂಜೆ 5-30 ಘಂಟೆಗೆ ಸರಿಯಾಗಿ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ದ್ವೀಪದ ಯಕ್ಷಗಾನದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬಹರೈನ್ ಹಾಗು ನಾಡಿನ ಅತಿಥಿ ಕಲಾವಿದರುಗಳ ಕೂಡುವಿಕೆಯೊಂದಿಗೆ ” ಶ್ರೀ ಶನೀಶ್ವರ ಮಹಾತ್ಮೆ ” ಎನ್ನುವಂತಹ ತುಳು ಕನ್ನಡ ಯಕ್ಷಗಾನವು ಖ್ಯಾತ ಯಕ್ಷಗಾನ ಕಲಾವಿದ ಯಕ್ಷಪುರುಷೋತ್ತಮ ದೀಪಕ ಪೇಜಾವರ ಇವರ ದಿಗ್ದರ್ಶನದಲ್ಲಿ ಪ್ರದರ್ಶನಗೊಳ್ಳಲಿರುವುದು . ದ್ವೀಪದ ಕಲಾವಿದರುಗಳೊಂದಿಗೆ ನಾಡಿನ ಖ್ಯಾತ ಯಕ್ಷ ಕಲಾವಿದಾರುಗಳಾದ ಹಾಸ್ಯದರಸ ಸುಂದರ ಬಂಗಾಡಿ,ಉಭಯತಿಟ್ಟು ವಿಶಾರದ ಭಾಗವತ ಡಾ . ಸತ್ಯನಾರಾಯಣ ಪುಣಿಚಿತ್ತಾಯ ,ಖ್ಯಾತ ಮದ್ದಳೆಗಾರ ಶ್ರೀಧರ ಪಡ್ರೆ ,ದುಬೈಯ ಹಿರಿಯ ಕಲಾವಿದ ಯಕ್ಷ ಮಯೂರ ಬಿರುದಾಂಕಿತ ಶೇಖರ್ ಶೆಟ್ಟಿ ,ಸೌದಿ ಅರೇಬಿಯಾದ ಯುವ ಭಾಗವತ ರೋಷನ್ .ಎಸ್ . ಕೋಟ್ಯಾನ್ ರಂಗದಲ್ಲಿ ಕಲಾ ಪ್ರೌಢಿಮೆಯನ್ನು ಮೆರೆಯಲಿದ್ದಾರೆ . ಯು .ಎ .ಇ ಯ ಜನಪ್ರಿಯ ಕನ್ನಡಿಗ ,ತುಳು ಕನ್ನಡ ಸಂಸ್ಕ್ರತಿಯನ್ನು ಕೊಲ್ಲಿ ರಾಷ್ಟ್ರದಲ್ಲಿ ಉಳಿಸಿ ಬೆಳೆಸುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಸರ್ವೋತ್ತಮ ಶೆಟ್ಟಿ , ಕತಾರ್ ನ ಖ್ಯಾತ ಉದ್ಯಮಿ ಹಾಗು ಸಮಾಜ ಸೇವಕ ಡಾ ಎಂ . ರವಿ ಶೆಟ್ಟಿ ಯವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ . ಅಲ್ಲದೆ ನಾಡಿನ ಹಾಗು ಕೊಲ್ಲಿ ರಾಷ್ಟ್ರಗಳ ಅನೇಕ ಸಾಧಕರು ,ಗಣ್ಯರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ
ಇಲ್ಲಿನ ಹಿರಿಯ ಕನ್ನಡಿಗ ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಯವರ ಕನಸಿನ ಕೂಸಾಗಿ ತುಳು ಸಂಸ್ಕ್ರತಿ ,ಭಾಷೆ ,ಕಲೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಅವರದೇ ಸಾರಥ್ಯದಲ್ಲಿ ಹುಟ್ಟಿಕೊಂಡ “ರೋಯಲ್ ತುಳುಕೂಟ ” ಸಂಘಟನೆಗೆ ಈಗ 14ರ ಸಂಭ್ರಮ . ಈ ಸಂಘಟನೆಯು ಇದಾಗಲೇ ಅನೇಕ ತುಳು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನೀಡಿದ್ದು ಇದೀಗ “ರೋಯಲ್ ಯಕ್ಷ ಐಸಿರಿ “ಎನ್ನುವಂತಹ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮದೊಂದಿಗೆ ಮತ್ತೆ ದ್ವೀಪದ ಯಕ್ಷ ಪ್ರೇಮಿಗಳನ್ನು ರಂಜಿಸಲಿದೆ.
ಯಕ್ಷಗಾನಕ್ಕೂ ಮುನ್ನ ಅದೇ ದಿನ ಸಂಜೆ 3-30 ಗೆ ಸರಿಯಾಗಿ ಸಾಮೂಹಿಕ ಶನಿ ಪೂಜೆಯು ಜರುಗಲಿದೆ . ಈ ಎಲ್ಲಾ ಕಾರ್ಯಕ್ರಮಗಳಲ್ಲೂ ದ್ವೀಪ ತುಳು ,ಕನ್ನಡಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರೋಯಲ್ ತುಳುಕೂಟದ ಅಧ್ಯಕ್ಷರಾದ ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಯವರು ಕೇಳಿಕೊಂಡಿದ್ದಾರೆ . ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದ್ದು ಕಾರ್ಯಕ್ರಮದ ಹೆಚ್ಚಿನ ವಿವರಗಳಿಗಾಗಿ ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 36616569 ಮೂಲಕ ಸಂಪರ್ಕಿಸಬಹುದು .