ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ : ಐದು ಹೊಸ ಸಂಕಲ್ಪದೊಂದಿಗೆ ಮುನ್ನಡೆಯೋಣ ಎಂದ ಪ್ರಧಾನಿ
ದೇಶಾದ್ಯಂತ ಮನೆಮನೆಯಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿ ಕೆಂಪುಕೋಟೆಯ ಮೇಲೆ ಸತತ 9ನೇ ಬಾರಿ ರಾಷ್ಟ್ರ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ತ್ಯಾಗ, ಬಲಿದಾನ, ನಿರಂತರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದೆ. ಸ್ವಾತಂತ್ರ್ಯ ಕೇವಲ ಒಬ್ಬರ ಸ್ವತ್ತಲ್ಲ. ಸ್ವಾತಂತ್ರ್ಯ ಎಲ್ಲರ ಹಕ್ಕು. ಎಲ್ಲರಿಗೂ ಸೇರಿದ ಈ ಸ್ವಾತಂತ್ರ್ಯ ಲಭಿಸಲು ಅನೇಕ ಮಹನೀಯರ ಕೊಡುಗೆ ಇದೆ. ಜೊತೆಗೆ ಹೋರಾಟವೂ ಸಾವಿರಾರು ಅನಾಮಧೇಯರಿಗೆ ಸೇರಿದೆ.”ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಾವು ದೇಶಾದ್ಯಂತ 75 ವರ್ಷಗಳ ಸ್ವಾತಂತ್ರ್ಯದ ಕುರಿತು ನಮ್ಮ ಚರ್ಚೆಯನ್ನು ಪ್ರಾರಂಭಿಸಿದ್ದೇವೆ. ನಾವು ಮುಂದಿನ ಬಾರಿ ಭೇಟಿಯಾದಾಗ, ನಮ್ಮ ಮುಂದಿನ 25 ವರ್ಷಗಳ ಪ್ರಯಾಣವು ಈಗಾಗಲೇ ಪ್ರಾರಂಭವಾಗಲಿದೆ, ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಿ” ಎಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಮೂಲಕ ದೇಶದ ಜನತೆ ಕರೆ ನೀಡಿದ್ದು, ದೇಶದೆಲ್ಲೆಡೆ ತ್ರಿವರ್ಣ ಧ್ವಜ ಹಾರಾಡುತ್ತಿದೆ ಎಂದರು.ಮುಂದಿನ ಪೀಳಿಗೆಗಾಗಿ ನವಭಾರತ ನಿರ್ಮಾಣದ ಅವಶ್ಯಕತೆ ಇದೆ ಅದಕ್ಕೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಮುಂದಿನ 25 ವರ್ಷಗಳವರೆಗೆ ಐದು ಹೊಸ ಸಂಕಲ್ಪದೊಂದಿಗೆ ಮುನ್ನಡೆಯೋಣ ಎಂದು ಹೇಳಿದ ಪ್ರಧಾನಿ ಮೋದಿ ತಮ್ಮ ಭಾಷಣದ ಪ್ರಮುಖ ಅಂಶವಾಗಿ ಪಂಚಪ್ರಾಣ ಸಂಕಲ್ಪವನ್ನು ಮಾಡಿದರು.
2047ರ ವೇಳೆಗೆ ದೇಶದ ಸಮಗ್ರ ಅಭಿವೃದ್ಧಿ. ಗುಲಾಮಿ ವ್ಯವಸ್ಥೆಯನ್ನು ಸಂಪೂರ್ಣ ತೊಡೆದು ಹಾಕುವುದು. ದೇಶದ ಬಗ್ಗೆ ಹಮ್ಮೆ ಮತ್ತು ಗೌರವ ಹೊಂದುವುದು. 130 ಕೋಟಿ ದೇಶದ ಜನತೆಯಲ್ಲಿ ಏಕತೆ ಮತ್ತು ಒಗ್ಗಟ್ಟನ್ನು ಮೂಡಿಸುವು. ಪ್ರಧಾನಿ, ಮುಖ್ಯಮಂತ್ರಿ ಸೇರಿ ದೇಶದ ನಾಗರಿಕರು ತಮ್ಮ ಕರ್ತವ್ಯವನ್ನು ನಿಭಾಯಿಸುವುದು ಎಂಬ ಹೊಸ ಸಂಕಲ್ಪದೊಂದಿಗೆ ಮುನ್ನಡೆಯೋಣ ಎಂದು ಸಂದೇಶ ನೀಡಿದರು.