ಬೈಂದೂರು : ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಲಾರಿ, ಟೆಂಪೋ ಚಾಲಕರ ಮುಷ್ಕರ
ಬೈಂದೂರು ವಲಯ ಲಾರಿ ಮತ್ತು ಟೆಂಪೋ ಮಾಲಿಕರು ಹಾಗೂ ಚಾಲಕರ ಸಂಘದ ವತಿಯಿಂದ 3ಎ ಲೈಸೆನ್ಸ್ ರದ್ದು ಪಡಿಸಿರುವುದನ್ನು ವಿರೋಧಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಬೈಂದೂರು ಯಡ್ತರೆ ಸರ್ಕಲ್‍ನಲ್ಲಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಯುತ್ತಿದೆ. ಬೈಂದೂರು ವಲಯ ಲಾರಿ ಮಾಲಿಕರ ಹಾಗೂ ಚಾಲಕರ ಸಂಘದ ಜಂಟಿ ಅಧ್ಯಕ್ಷ ನೆಲ್ಯಾಡಿ ದಿವಾಕರ ಶೆಟ್ಟಿ ಮಾತನಾಡಿ, ಈ ವರೆಗೆ ಇಲ್ಲದ ಕಾನೂನನ್ನು ಪ್ರಸ್ತುತ ಹೇರಿರುವ ಕ್ರಮದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಬೈಂದೂರು ರೈತರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ ಮಾತನಾಡಿ, ಕರ್ನಾಟಕ ರಾಜ್ಯಕ್ಕೆ ಒಂದು ಕಾನೂನು, ಉಡುಪಿ ಜಿಲ್ಲೆಗೊಂದು ಕಾನೂನು ಎನ್ನುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಕಾನೂನು ಆದೇಶಿಸಿ, ಆದರೆ ಉಡುಪಿ ಜಿಲ್ಲೆ ಇಲ್ಲಿ ತುಂಡು ಭೂಮಿಗಳನ್ನು ಹೊಂದಿದ್ದು ಇಲ್ಲಿಯ ಮಣ್ಣು ಕಲ್ಲುಗಳನ್ನು ಕಾನೂನು ಬದ್ಧಗೊಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದ ಅವರು, ಕೂಲಿ ಕಾರ್ಮಿಕರು ಅತಂತ್ರರಾಗಿದ್ದಾರೆ. ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಎಂದು ಆಗ್ರಹಿಸಿದರು.
ಬೈಂದೂರು ವಲಯ ಲಾರಿ ಮಾಲಿಕ ಹಾಗೂ ಚಾಲಕರು ಕಾರ್ಯದರ್ಶಿ ಕೆ ಗಣೇಶ್, ಉಪಾಧ್ಯಕ್ಷ ಮಾಧವ ಪೂಜಾರಿ ಶಿರೂರು, ಹಿರಿಯ ಸದಸ್ಯ ದೇವಪ್ಪ ಬಳೆಗಾರ ಉಪ್ಪುಂದ, ಬೈಂದೂರು ವಲಯ ಲಾರಿ ಮಾಲಿಕ ಹಾಗೂ ಚಾಲಕರ ಸಂಘ ಸದಸ್ಯರು ಉಪಸ್ಥಿತರಿದ್ದರು.