ಬೈಂದೂರಿನ ಸೋಮೇಶ್ವರ ಬೀಚ್‍ಗೆ ಮೂಲಸೌಕರ್ಯ ಒದಗಿಸುವಂತೆ ಆಗ್ರಹ

ಬೈಂದೂರು ಕ್ಷೇತ್ರದ ಪಡುವರಿ ಗ್ರಾಮದ ಸೋಮೇಶ್ವರ ಬೀಚ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಬೀಚ್‍ಗೆ ಮೂಲ ಸೌಕರ್ಯ ಒದಗಿಸುವಂತೆ ಜನತೆ ಆಗ್ರಹಿಸುತ್ತಿದ್ದಾರೆ.

ಸರಿಸುಮಾರು 2ಕಿಮೀ ಅಂತರದಲ್ಲಿ ಅಗಾಧ ಸೌಂದರ್ಯವಿದೆ. ಬೀಚ್ ಸೌಂದರ್ಯ ಆಕರ್ಷಕ. ತೀರದಿಂದ 300ಮೀಟರ್ ಅಂತರದವರೆಗೆ ಆಳವಿಲ್ಲ. ತೀರದ ಉದ್ದಕ್ಕೂ ಪ್ರಾಕೃತಿಕ ಕಲ್ಲುಬಂಡೆಗಳು ಹರಡಿಕೊಂಡಿದೆ. ಮಂದಗತಿಯಲ್ಲಿ ಬಂದು ಬಂಡೆಗೆ ಅಪ್ಪಳಿಸಿ ಹಿಂದಿರುಗುವ ಅಲೆಗಳ ಮೋಹಕತೆ ಬೆರಗು ಮೂಡಿಸುತ್ತದೆ. ಇಲ್ಲಿ ಸುಮನಾವತಿ ನದಿ ಕಡಲು ಸೇರುವ ವಿಹಂಗಮ ಪ್ರಾಕೃತಿಕ ನೋಟ ಅವರ್ಣನೀಯ. ದಡದಲ್ಲಿನ ಪುರಾಣ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ, ಪ್ರಕೃತಿ ವಿಸ್ಮಯದ ನಾಗತೀರ್ಥ, ಕ್ಷಿತಿಜ ನಿಸರ್ಗಧಾಮ ಪ್ರವಾಸಿಗರ ಆಕರ್ಷಣೆಗೆ ಪ್ರಾಮುಖ್ಯತೆ ಒದಗಿಸಿದೆ.

ಸೋಮೇಶ್ವರ ದೇವರ ಕಾರಣಕ್ಕೆ ಬೀಚ್‍ಗೆ ಸೋಮೇಶ್ವರ ಬೀಚ್ ಎಂಬ ಹೆಸರು ಬಂದಿದೆ. ಗೋಕರ್ಣ ಹೊರತುಪಡಿಸಿದರೆ ಪಶ್ಚಿಮಾಭಿಮುಖವಾಗಿರುವ ಏಕೈಕ ಶಿವಾಲಯವಿದು. ಸೂರ್ಯಾಸ್ತಮಾನದ ವೇಳೆ ಸೂರ್ಯನ ಕಿರಣಗಳು ಮುಖ್ಯದ್ವಾರದ ಮೂಲಕ ನೇರವಾಗಿ ಗರ್ಭಗುಡಿಯಲ್ಲಿರುವ ಅತ್ಯಪೂರ್ವದ ಶಿವಲಿಂಗದ ಮೇಲೆ ಬೀಳುವ ನೋಟವಂತೂ ಅನನ್ಯ. ಲಂಕೆಗೆ ಹೊರಟ ಶ್ರೀರಾಮ ತನ್ನ ಸೇನೆಯೊಂದಿಗೆ ಇಲ್ಲಿ ಕಳೆದು ಶಿವದರ್ಶನ ಪಡೆದ ಸಂಕೇತವಾಗಿ ಸೋಮೇಶ್ವರ ದೇಗುಲ ಸ್ಥಾಪಿತವಾಯಿತು ಎನ್ನಲಾಗಿದೆ. ತೀರದಲ್ಲಿರುವ ಇನ್ನೊಂದು ಪ್ರಾಕೃತಿಕ ವೈಚಿತ್ರ್ಯ ನಾಗತೀರ್ಥ. ವರ್ಷದ ಎಲ್ಲಾ ಕಾಲದಲ್ಲಿಯೂ ಪುಟ್ಟ ಕುಂಡದಂತಿರುವ ತೀರ್ಥದಲ್ಲಿ ನೀರು ಇರುತ್ತದೆ.

ಕರಾವಳಿ ಜಿಲ್ಲೆಯಲ್ಲಿ ಧಾರ್ಮಿಕವಾಗಿ, ಪ್ರಾಕೃತಿಕವಾಗಿ ಅತ್ಯಂತ ಮನೋಹರ ಬೀಚ್ ಇದು. ಆದರೆ ನಿರೀಕ್ಷಿತ ಸೌಕರ್ಯ ಇನ್ನೂ ಒದಗಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಬೀಚ್ ಹಾಗೂ ದೇವರ ದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಕುಟುಂಬ ಸಮೇತರಾಗಿ ಬರುವವರೇ ಹೆಚ್ಚು. ವಿಶ್ರಾಂತಿಗೃಹ, ಶೌಚಾಲಯ, ಸ್ನಾನಗೃಹ, ವಾಹನ ನಿಲುಗಡೆ ವ್ಯವಸ್ಥೆಯಂತಹ ಮೂಲಸೌಕರ್ಯ ಒದಗಿಸಬೇಕು. ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಗಮನಹರಿಸಬೇಕು.