ನೆಲ್ಯಾಡಿ: ಹೃದಯಾಘಾತದಿಂದ ವಿದ್ಯಾರ್ಥಿ ನಿಧನ
ನೆಲ್ಯಾಡಿ: ಹೃದಯಾಘಾತಕ್ಕೆ ಒಳಗಾಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದಲ್ಲಿ ನ.6ರಂದು ಸಂಜೆ ನಡೆದಿದೆ. ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟು ನಿವಾಸಿ ಯೂಸುಫ್ ಎಂಬವರ ಪುತ್ರ ಮಹಮ್ಮದ್ ಇರ್ಪಾನ್(18ವ.)ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಪುತ್ತೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಎ.ಸಿ.ಮೆಕ್ಯಾನಿಕ್ ವ್ಯಾಸಂಗ ಮಾಡುತ್ತಿದ್ದ ಇರ್ಪಾನ್ ಎಂದಿನಂತೆ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದಿದ್ದರು. 6 ಗಂಟೆಯ ವೇಳೆಗೆ ಇರ್ಪಾನ್ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿದ್ದು ಮನೆಯವರು ತಕ್ಷಣ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ. ಇರ್ಪಾನ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತ ಬಾಲಕ ತಂದೆ ಯೂಸುಫ್, ತಾಯಿ ಅಮೀನಾ, ಮೂವರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಮೃತರ ಮನೆಗೆ ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ಸದಸ್ಯ ಮಹಮ್ಮದ್ ಹನೀಫ್, ಕರ್ನಾಟಕ ಮುಸ್ಲಿಂ ಜಮಾಅತ್ ನೆಲ್ಯಾಡಿ ವೃತ್ತ ಅಧ್ಯಕ್ಷ ಕೆ.ಇ.ಅಬೂಬಕ್ಕರ್, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಮಸೀದಿ ಕಾರ್ಯದರ್ಶಿ ಮಹಮ್ಮದ್ ಹನೀಫ್ ಸಿಟಿ, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ.ಕೆ. ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.