ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ & ಗೈಡ್ಸ್ ವಾರ್ಷಿಕ ಬೇಸಿಗೆ ಶಿಬಿರ

ವಿಟ್ಲ: ಮಾಣಿ , ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಭಾರತ್ ಸ್ಕೌಟ್ಸ್ & ಗೈಡ್ಸ್ ವಾರ್ಷಿಕ ಶಿಬಿರವನ್ನು ಕಶೆಕೋಡಿಯ ಶ್ರೀ ಲಕ್ಷ್ಮೀವೆಂಕರಮಣ ದೇವಸ್ಥಾನ ಬಾಳ್ತಿಲ ಗ್ರಾಮದಲ್ಲಿ ಏಪ್ರಿಲ್ 6 ಮತ್ತು 7 ರಂದು ಹಮ್ಮಿಕೊಳ್ಳಲಾಯಿತು.

ಶಿಬಿರವನ್ನು ಪೂರ್ವಾಹ್ನ 9.30ಕ್ಕೆ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಮತ್ತು ಬಾಲವಿಕಾಸ ಟ್ರಸ್ಟ್ ಮಾಣಿಯ ಅಧ್ಯಕ್ಷರೂ ಆಗಿರುವ ಶ್ರೀ ಪ್ರಹ್ಲಾದ ಶೆಟ್ಟಿ .ಜೆ ರವರು ಶಾಲಾ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಡುವ ಮೂಲಕ ಹಾಗೂ ಸ್ಕೌಟ್ – ಗೈಡ್ ವಿದ್ಯಾರ್ಥಿಗಳು ತರಕಾರಿ ಬೀಜ ಬಿತ್ತನೆ ಮಾಡುವ ಶಾಲಾ ಕೈತೋಟಕ್ಕೆ ಮತ್ತು ವಾರ್ಷಿಕ ಶಿಬಿರಕ್ಕೆಚಾಲನೆ ನೀಡಿದರು.
ಶಾಲಾ ಆಡಳಿತಾಧಿಕಾರಿಯವರಾದ ಶ್ರೀ ರವೀಂದ್ರ ದರ್ಬೆಯವರು ಶುಭ ಹಾರೈಸಿದರು.

ನಂತರ ಕೈಗೊಂಡ ಹೊರಸಂಚಾರದಲ್ಲಿ ರಿವಾ ವಾಟರ್ ಪ್ಯಾಕಿಂಗ್ ಇಂಡಸ್ಟ್ರೀಸ್ ಗೆ ಭೇಟಿ ನೀಡಿ ಅಲ್ಲಿಯ ಅತ್ಯಾಧುನಿಕ ವ್ಯವಸ್ಥೆ ಯನ್ನು ಬಳಸಿ ನೀರನ್ನು ಸಂಸ್ಕರಿಸಿ ಪ್ಯಾಕಿಂಗ್ ಮಾಡುವ ವಿಧಾನವನ್ನು ವಿದ್ಯಾರ್ಥಿಗಳು ಕಣ್ಣುತುಂಬಿಸಿಕೊಂಡರು. ಶಿಬಿರ ಸ್ಥಳಕ್ಕೆ ವನವಿದ್ಯಾ ಸಂಕೇತದ ಮೂಲಕ ಕಾಲುನಡಿಗೆಯಲ್ಲಿ ತಲುಪಿದ ಬಳಿಕ ಧ್ವಜವಂದನೆಯನ್ನು ಸಲ್ಲಿಸಿದರು. ಬಳಿಕ ಕಸದಿಂದ ರಸ, ಕಿಮ್ಸ್ ಗೇಮ್, ಹೊರಾಂಗಣ ಆಟಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಾಯಿತು. ರಾತ್ರಿ ನಡೆದ ಶಿಬಿರಾಗ್ನಿ ಕಾರ್ಯಕ್ರಮವನ್ನು ಕಶೆಕೋಡಿ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಕಂಟಿಕ ಗೋಪಾಲ್ ಶೆಣೈ ರವರು ಉದ್ಘಾಟಿಸಿದರು. ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಹ್ಲಾದ ಶೆಟ್ಟಿ .ಜೆ ರವರು “ಇಂದಿನ ಜೀವನ ಶೈಲಿಯಲ್ಲಿ ವಿದ್ಯಾರ್ಥಿಗಳಿಗೆ ಶಿಬಿರದ ಅನುಭವವು ಮರೆಯಲಾಗದ ಶಿಕ್ಷಣ ನೀಡಬಲ್ಲದು ” ಎಂದರು.
ಭಾರತ್ ಸ್ಕೌಟ್ಸ್ & ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ “ಬಾಲವಿಕಾಸ ಶಾಲೆಯು ಎಲ್ಲಾ ಕಾರ್ಯಕ್ರಮಗಳನ್ನು ಹೊಸತನದಿಂದ ಆಯೋಜಿಸುತ್ತಾ, ಮಕ್ಕಳ ಸರ್ವಾಂಗೀಣ ಪ್ರಗತಿಯಲ್ಲಿ ಶ್ರಮಿಸುತ್ತಿರುವುದು ಹೆಮ್ಮೆಯ ವಿಚಾರ”ಎಂದರು.
ವೇದಿಕೆಯಲ್ಲಿ ಪುರೋಹಿತರಾದ ನಿತ್ಯಾನಂದ ಭಟ್, ಶಾಲೆಯ ಆಡಳಿತಾಧಿಕಾರಿ ರವೀಂದ್ರ ದರ್ಬೆ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ .ಶೆಟ್ಟಿ ಉಪಸ್ಥಿತರಿದ್ದರು.
ಮರುದಿನ ಬೆಳಿಗ್ಗೆ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ ನಡೆದು, ತದನಂತರದಲ್ಲಿ ಶಿಬಿರಾರ್ಥಿಗಳಿಗಾಗಿ ಖ್ಯಾತ ರಂಗನಿರ್ದೇಶಕರಾದ ಕೃಷ್ಣಪ್ಪ ಬಂಬಿಲರವರು ರಂಗಕಲೆ -ಬದುಕಿನ ಸೆಲೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂಜೀವ ನಾಯಕ್ ಕಲ್ಲೇಗರವರು ಮಾತಾನಾಡಿ “ವಿದ್ಯಾರ್ಥಿಗಳಲ್ಲಿರುವ ಸರ್ವಧರ್ಮ ಸಮನ್ವಯತೆ ಗಮನಾರ್ಹವಾದದ್ದು. ಮಕ್ಕಳಿಗೆ ಅತ್ಯುತ್ತಮ ಸಂಸ್ಕಾರ ನೀಡಿದಾಗ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ, ಜೀವನ ಕೌಶಲ್ಯ ಪಡೆಯುವರು. ಅಂತಹ ಶಿಕ್ಷಣವನ್ನು ಬಾಲವಿಕಾಸ ವಿದ್ಯಾಸಂಸ್ಥೆ ನೀಡುತ್ತಿರುವುದು ಹೆಮ್ಮೆಯ ವಿಚಾರ ” ಎಂದರು.
ಈ ಎಲ್ಲಾ ಕಾರ್ಯಕ್ರಮವನ್ನು ಗೈಡ್ಸ್ ವಿದ್ಯಾರ್ಥಿನಿಯರಾದ ನಿಧಿಶಾ, ದೇವಿಕಾ, ಪ್ರಗತಿ, ನಿವ್ಯಾ ರೈ, ವೈಷ್ಣವಿ ನಿರೂಪಿಸಿದರು. ಶಿಬಿರದ ನಾಯಕಿ ಲೇಡಿ ಸ್ಕೌಟ್ ಮಾಸ್ಟರ್ ಅನಿತಾಗೌರಿ ಸ್ವಾಗತಿಸಿ, ವಂದಿಸಿದರು. ಈ ಎಲ್ಲಾ ಸಂದರ್ಭಗಳಲ್ಲಿ ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿಯಾದ ಮಹೇಶ್ ಶೆಟ್ಟಿ ಜೆ, ಶಾಲೆಯ ಸ್ಕೌಟ್ ಮಾಸ್ಟರ್ಸ್ , ಗೈಡ್ ಕ್ಯಾಪ್ಟನ್ಸ್ , ಕಬ್ ಮಾಸ್ಟರ್, ಫ್ಲಾಕ್ ಲೀಡರ್ಸ್ ಗಳು, ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು, ಪಾಲಕರು, ಹಿತೈಷಿಗಳು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.