ಬಟ್ಟೆ ಕೈ ಚೀಲಗಳ ಬಿಡುಗಡೆ ಸಮಾರಂಭ
ಬಂಟ್ವಾಳ: ತುಂಬೆ ಗ್ರಾ.ಪಂ ಬಂಟ್ವಾಳ ಇದರ ಆಶ್ರಯದಲ್ಲಿ ಪ್ರಕೃತಿ ಸಂಜೀವಿನಿ ಒಕ್ಕೂಟ ತುಂಬೆ ಇದರ ಸಹಕಾರದೊಂದಿಗೆ ಬಟ್ಟೆ ಕೈ ಚೀಲಗಳ ಬಿಡುಗಡೆ ಸಮಾರಂಭ ತುಂಬೆ ಗ್ರಾಮ ಪಂಚಾಯತಿ ಸಭಾಂಗಣಲ್ಲಿ ನಡೆಯಿತು. ತುಂಬೆ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ್ ಬಿ. ತುಂಬೆ ಪ್ರಾಸ್ತವಿಕವಾಗಿ ಮಾತನಾಡಿ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಪರಿಸರ ಹಾಳಾಗಿದೆ. ಬಳಸಿದ ಪ್ಲಾಸ್ಟಿಕ್ ಚೀಲಗಳನ್ನು ರಸ್ತೆ ಬದಿ ಎಸೆದು ಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ಲಾಸ್ಟಿಕ್ ಚೀಲ ನಮ್ಮ ಕೈಗೆ ಸಿಗಬಾರದು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ, ಪ್ರಸ್ತುತ 3 ಸಾವಿರ ಕೈ ಚೀಲಗಳು ತಯಾರಾಗಿದೆ. ಇನ್ನೂ 6 ಸಾವಿರ ಕೈ ಚೀಲಗಳು ಬೇಕಾಗಿದೆ. ಗ್ರಾಮದ ಪ್ರತಿ ಮನೆಗೂ ಬಟ್ಟೆ ಚೀಲವನ್ನು ನಿಗದಿತ ದರ ಪಡೆದು ವಿತರಿಸಲಾಗುವುದು ಎಂದರು. ಮುಂದಿನ 3 ತಿಂಗಳ ಬಳಿಕ ಪ್ಲಾಸ್ಟಿಕ್ ಚೀಲ ಬಳಸುವ ನಾಗರಿಕರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ರೆ.ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಇದೊಂದು ಅತ್ಯುತ್ತಮವಾದ ಕಾರ್ಯಕ್ರಮ. ನಾವು ನಮ್ಮ ದೈನಂದಿನ ಜೀವನದಲ್ಲಿ ಬಟ್ಟೆ ಕೈ ಚೀಲ ಉಪಯೋಗಿಸಬೇಕು ಎನ್ನುವ ದೃಢನಿರ್ಧಾರವನ್ನು ಪ್ರತಿಯೊಬ್ಬರು ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯುಂಟಾಗಿದೆ. ಪಂಚಾಯತಿ ಹಮ್ಮಿಕೊಂಡ ಈ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು. ಬಳಿಕ ಕೈ ಚೀಲಗಳನ್ನು ಬಿಡುಗಡೆಗೊಳಿಸಲಾಯಿತು. ತುಂಬೆ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಹಾಗೂ ಕಲಾವಿದ ಸದಾಶಿವ ಡಿ. ತುಂಬೆ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಅಬ್ದುಲ್ ಸಲಾಂ ತುಂಬೆ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಂಚಾಯತಿ ಉಪಾಧ್ಯಕ್ಷೆ ಜಯಂತಿ ಕೇಶವ, ಪಿಡಿಒ ಚಂದ್ರಾವತಿ, ಜ್ಯೋತಿಷಿ ಅನಿಲ್ ಪಂಡಿತ್, ಪ್ರಕೃಇ ಸಂಜೀವಿನಿ ಘಟಕದ ಶಶಿಕಲಾ ಉದಯ ಕುಮಾರ್, ದಿವ್ಯ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಉದಯ ಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.