bantwala : ಗುಡಿಸಲಲ್ಲಿ ವಾಸವಾಗಿದ್ದ ಬಡ ಕುಟುಂಬಕ್ಕೆ ಕಾಂಗ್ರೆಸ್ ನೇತೃತ್ವದಲ್ಲಿ ಮನೆ ನಿರ್ಮಾಣ
ಬಂಟ್ವಾಳ: ಹಲವು ವರ್ಷಗಳಿಂದ ಸ್ವಂತ ಸೂರಿಲ್ಲದೆ ಗುಡಿಸಲಿನಲ್ಲಿ ವಾಸವಾಗಿದ್ದ ಪರಿಶಿಷ್ಠ ಜಾತಿ ಸಮುದಾಯದ ಬಡ ಕುಟುಂಬಕ್ಕೆ ಸಜೀಪಮೂಡ ವಲಯ ಕಾಂಗ್ರೆಸ್ ನೇತೃತ್ವದಲ್ಲಿ ಸುಜ್ಜಿತವಾದ ಮನೆಯೊಂದು ನಿರ್ಮಾಣಗೊಳ್ಳುತ್ತಿದೆ. ಸ್ಥಳೀಯ ಯುವ ಸಿವಿಲ್ ಇಂಜಿನಿಯರ್ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಮಾನವೀಯ ನೆಲೆಯಲ್ಲಿ ಮನೆ ನಿರ್ಮಿಸಿ ಕೊಡುತ್ತಿದ್ದಾರೆ.
ಸಜೀಪಮೂಡ ಗ್ರಾಮದ ಕುಚ್ಚಿಗುಡ್ಡೆ ಎಂಬಲ್ಲಿ ಪರಿಶಿಷ್ಠ ಜಾತಿ ಸಮುದಾಯಕ್ಕೆ ಸೇರಿದ ಬಾಡ ಹಾಗೂ ನೊಕ್ಕೆ ದಂಪತಿ ಕುಟುಂಬ ಹಲವಾರು ವರ್ಷಗಳಿಂದ ಜೀವನ ಮಾಡುತ್ತಿದ್ದರು. ಬಾಡ, ನೊಕ್ಕೆ ಹಾಗೂ ಪುತ್ರ ಸಂಜೀವ ನಿಧನದ ಬಳಿಕ ಇಬ್ಬರು ಹೆಣ್ಣು ಮಕ್ಕಳಾದ ಭಾಗಿ ಹಾಗೂ ಕಮಲ ಇನ್ನೊರ್ವ ಸಹೋದರ ಬಾಬು ಜೊತೆಯಾಗಿ ಜೀವನ ನಡೆಸುತ್ತಿದ್ದರು.
ಸುಮಾರು 15 ವರ್ಷದ ಹಿಂದೆ ವಸತಿ ಯೋಜನೆಯಡಿ ಇವರಿಗೆ ಮನೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿ ಲಿಂಟಲ್ ಹಂತದವರೆಗೆ ಮನೆ ನಿರ್ಮಾಣಗೊಂಡಿತ್ತು. ಕಾರಣಾಂತರಗಳಿಂದ ಉಳಿದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದೇ ಅರ್ಧ ನಿರ್ಮಾಣಗೊಂಡಿದ್ದ ಮನೆಯೂ ಕುಸಿಯುವ ಸ್ಥಿತಿಗೆ ತಲುಪಿತ್ತು. ಮನೆ ನಿರ್ಮಾಣದ ಕನಸು ನುಚ್ಚುನೂರಾಗಿ ಮನೆ ಪಕ್ಕವೇ ಈ ಬಡ ಕುಟುಂಬ ಜೋಪಡಿ ನಿರ್ಮಿಸಿ ಜೀವನ ಕಳೆಯುತ್ತಿತ್ತು.
ಇತ್ತ ಮನೆಗೆ ಆಧಾರವಾಗಿದ್ದ ಬಾಬು ಮೂರು ತಿಂಗಳ ಹಿಂದೆ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಭಾಗಿ ಅನಾರೋಗ್ಯದಿಂದ ಗುಡಿಸಲಿನಲ್ಲಿ ಮಲಗಿದ ಸ್ಥಿತಿಯಲ್ಲಿದ್ದಾರೆ. ಈ ಕುಟುಂಬದ ಕರುಣಾಜನಕ ಸ್ಥಿತಿಯನ್ನು ಮನಗಂಡ ಸಜೀಪಮೂಡ ವಲಯ ಕಾಂಗ್ರೆಸ್ ಮುಂದಳಾತ್ವದಲ್ಲಿ ಶೈಲೇಶ್ ಪೂಜಾರಿಯವರು ಸುಮಾರು 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹಳೆಯ ಮನೆಯನ್ನು ಸಂಪೂರ್ಣ ತೆರವುಗೊಳಿಸಿ ಹೊಸ ಮನೆ ನಿರ್ಮಾಣಗೊಳ್ಳುತ್ತಿದ್ದು ಭಾಗಶಃ ಕಾಮಗಾರಿ ಪೂರ್ಣಗೊಂಡಿದೆ.