ಅತ್ಯಾಚಾರಿ , ಕೊಲೆಗಾರರ ಜೊತೆಗೆ ಶಾಸಕ ಹರೀಶ್ ಪೂಂಜಾರ ನಂಟು ಏನು: ಶೇಖರ್ ಲಾಯಿಲ ಪ್ರಶ್ನೆ

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ , ಬಾಲ್ಯ ವಿವಾಹ , ಗರ್ಭಪಾತ ಸೇರಿದಂತೆ ಶಿಬಾಜೆಯ ದಲಿತ ಯುವಕನ ಕೊಲೆ , ತೋಟತ್ತಾಡಿಯ ಆತ್ಮಹತ್ಯೆ ಪ್ರೇರಣೆ ಪ್ರಕರಣದ ಆರೋಪಿಗಳೊಂದಿಗೆ ಶಾಸಕ ಹರೀಶ್ ಪೂಂಜಾರ ನಂಟು ಏನು ? ಬೆಂಗಳೂರಿನಲ್ಲಿ ನಡೆಯುವ ಹಲ್ಲೆ ಪ್ರಕರಣದ ಬಗ್ಗೆ ಮಾತನಾಡುವ ಶಾಸಕ ತನ್ನ ಕ್ಷೇತ್ರದ ಕ್ರಿಮಿನಲ್ ವ್ಯಕ್ತಿಗಳನ್ನು ರಕ್ಷಿಸುವ ಹಿನ್ನೆಲೆ ಏನು ಎಂದು ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ ಪ್ರಶ್ನಿಸಿದ್ದಾರೆ .
ಮಿತ್ತಬಾಗಿಲು ಗ್ರಾಮದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸದಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಕ್ರಿಮಿನಲ್ ಗಳ ಸಂಖ್ಯೆ ಹೆಚ್ಚಾಗಲು ಶಾಸಕ ಹರೀಶ್ ಪೂಂಜಾ ಅವರ ಕೈವಾಡವಿದೆ. ಕ್ರಿಮಿನಲ್ ಆರೋಪಿಗಳನ್ನು ರಕ್ಷಿಸುವ ಮೂಲಕ ರಾಜ್ಯದ ನಂ 1 ಶಾಸಕ ಶಾಸಕರಾಗಿದ್ದಾರೆಯೇ ಹೊರತು ಅಭಿವೃದ್ಧಿಯಿಂದಲ್ಲ. ಮಿತ್ತಬಾಗಿಲು ಪ್ರಕರಣದ ಆರೋಪಿ ಸೇರಿದಂತೆ ಶಿಬಾಜೆ ದಲಿತ ಯುವಕನ ಕೊಲೆ ಆರೋಪಿಗಳನ್ನು ಬಂಧಿಸದಂತೆ , ತೋಟತ್ತಾಡಿ ಚಂದ್ರಶೇಖರ ಪೂಜಾರಿ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸದಂತೆ ಪೋಲಿಸ್ ಇಲಾಖೆಯ ಮೇಲೆ ಒತ್ತಡ ಹಾಕುವ ಮೂಲಕ ನೀಚತನದ ರಾಜಕೀಯ ಮಾಡುತ್ತಿದ್ದಾರೆ ಎಂದು ಶೇಖರ್ ಲಾಯಿಲ ಆರೋಪಿದ್ದಾರೆ. ಬೆಂಗಳೂರು ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಒತ್ತಾಯಿಸುವ ಶಾಸಕ ಹರೀಶ್ ಪೂಂಜಾ ತನ್ನ ಕ್ಷೇತ್ರದ ಕ್ರಿಮಿನಲ್ ಆರೋಪಿಗಳ ಜೊತೆಗೆ ನಂಟು ಹೊಂದಿದ್ದಾರೆ. ಶಾಸಕರಿಗೆ ದಮ್ಮು , ತಾಕತ್ತಿದ್ದರೆ ವಾರದೊಳಗೆ ಮಿತ್ತಬಾಗಿಲು, ತೋಟತ್ತಾಡಿ, ಶಿಬಾಜೆ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದಾರೆ ಪೋಲಿಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
