ಗುಜರಾತ್ ಸೂಕ್ತ ಸರಕಾರ ಆಗಿರಲಿಲ್ಲ ಏಕೆ?

ಬಿಲ್ಕಿಸ್ ಬಾನೊ ಅತ್ಯಾಚಾರದ ಸಂಬಂಧ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 11 ಜನರ ಬಿಡುಗಡೆಗೆ ಗುಜರಾತ್ ಸೂಕ್ತ ಸರಕಾರ ಆಗಿರಲಿಲ್ಲ. ಕಪಟತನ, ನ್ಯಾಯ ವಂಚನೆ ಮೂಲಕ ಅವರನ್ನು ಗುಜರಾತ್ ಸರಕಾರ ಬಿಡಿಸಿಕೊಂಡಿದೆ ಮತ್ತೆ ಅವರು ಕೂಡಲೆ ಜೈಲಿಗೆ ಹೋಗಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪು ನ್ಯಾಯಾಂಗದ ಗೌರವ ಹೆಚ್ಚಿಸಿದೆ. ಗುಜರಾತ್ ಸರಕಾರದ ಮುಖವಾಡ ಕಳಚಿದೆ.
2002ರಲ್ಲಿ ಗುಜರಾತಿನಲ್ಲಿ ನಡೆದ ಅಮಾನವೀಯ ಧಾರ್ಮಿಕ ಕೊಲೆ, ಸುಲಿಗೆ, ಹಲ್ಲೆ, ದರೋಡೆ, ಸುಳ್ಳು ಪ್ರಚಾರಗಳು ಜಾಗತಿಕ ಖಂಡನೆ ಕಂಡರೂ ಆ ರಾಜ್ಯದವರಿಗೆ ನಾಚಿಕೆ ಆಗಿಲ್ಲ. ಮತ್ತೆ ಮತ್ತೆ ಸುಳ್ಳು ಹೇಳಿ ದುರಾಡಳಿತವನ್ನು ಸಾಚಾ ಎಂಬಂತೆ ಬಿಂಬಿಸಿದ್ದಾರೆ. ಆಗಿನ ಗುಜರಾತ್ ದುರಾಗ್ರಹ, ದುರಾಡಳಿತ ಮಂದಿಯೇ ಈಗ ಒಕ್ಕೂಟ ಸರಕಾರದಲ್ಲಿ ಪ್ರಧಾನಿ ಮತ್ತು ಗೃಹ ಮಂತ್ರಿಗಳು. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಉಜ್ವಲ್ ಭುಯಿಯಾಂ ನೀಡಿರುವ ತೀರ್ಪು ಚಾರಿತ್ರಿಕ ಮತ್ತು ಗಟ್ಟಿ ಧೈರ್ಯದ್ದಾಗಿದೆ.

ಜೀವಾವಧಿ ಶಿಕ್ಷೆಗೆ ಒಳಗಾದವರು 14 ವರುಷದ ಶಿಕ್ಷೆಯ ಬಳಿಕ ಶಿಕ್ಷೆ ರದ್ದು ಕೋರಲು ಅರ್ಹರಾಗುತ್ತಾರೆ. ಆದರೆ ಅವರು ಪೆರೋಲ್ ಮೇಲೆ ಹೊರಗಿದ್ದ ಕಾಲ ಲೆಕ್ಕಕ್ಕೆ ಬರುತ್ತದೆ. ಅದಕ್ಕಿಂತ ಮುಖ್ಯವಾಗಿ ಶಿಕ್ಷೆಗೆ ಈಡಾದವರು ವಿಧಿಸಿದ ದಂಡವನ್ನು ಪಾವತಿಸಬೇಕು. ಕಟ್ಟದಿದ್ದರೆ ಕೋರ್ಟು ನೀಡಿರುವ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು. ಅಡ್ಡ ದಾರಿಯ ಬಿಡುಗಡೆ ಕಂಡಿದ್ದ ಬಿಲ್ಕಿಸ್ ಬಾನೊ ಶಿಕ್ಷಿತ 11 ಮಂದಿ ಕೋರ್ಟು ವಿಧಿಸಿದ್ದ ದಂಡ ಕಟ್ಟಿಲ್ಲ. ಮುಂಬಯಿಯ ಸಿಬಿಐ ವಿಶೇಷ ನ್ಯಾಯಾಲಯವು ಶಿಕ್ಷೆ ನೀಡುವಾಗ ಅತ್ಯಾಚಾರಿಗಳಿಗೆ ತಲಾ 34,000 ರೂಪಾಯಿ ದಂಡ ವಿಧಿಸಿತ್ತು. ದಂಡ ಕಟ್ಟದಿದ್ದರೆ ಸೆರೆಮನೆ ಶಿಕ್ಷೆ ಅವಧಿ 34 ವರುಷ ಎಂದು ಹೇಳಿತ್ತು. ಸಂತ್ರಸ್ತೆಗೆ ಪರಿಹಾರ ಸಿಗಬಾರದು ಎಂದು ಈ ಅತ್ಯಾಚಾರಿಗಳು ದಂಡ ಕಟ್ಟದಂತೆ ರಾಜಕೀಯ ಹಿತಾಸಕ್ತಿಗಳು ನಾಟಕ ಆಡುತ್ತಲೇ ಕಾಲ ಕಳೆದರು. ಅಲ್ಲದೆ ಪೆರೋಲ್ ಸ್ವಾತಂತ್ರ್ಯವನ್ನು ಸಹ ಅನುಭವಿಸಿದ್ದ ಅತ್ಯಾಚಾರಿಗಳು ಬಿಡುಗಡೆಗೆ ಅರ್ಹತೆ ಪಡೆದಿರಲಿಲ್ಲ.

ಅತ್ಯಾಚಾರಿಗಳನ್ನು ಬಿಡಿಸಿಕೊಳ್ಳಲು ಗುಜರಾತ್ ಸೂಕ್ತ ಸರಕಾರ ಆಗಿರಲಿಲ್ಲ. ಕ್ರಿಮಿನಲ್ ದಂಡ ಸಂಹಿತೆಯ 432 ಮತ್ತು 433 ವಿಧಿಗಳು ಸೂಕ್ತ ಸರಕಾರದ ವಿವರಣೆ ನೀಡಿವೆ. ಅತ್ಯಾಚಾರಿಗಳಿಗೆ ಮುಂಬಯಿ ಸಿಬಿಐ ವಿಶೇಷ ಕೋರ್ಟು ಶಿಕ್ಷೆ ನೀಡಿತ್ತಾದ್ದರಿಂದ ಇಲ್ಲಿ ಸೂಕ್ತ ಸರಕಾರ ಮಹಾರಾಷ್ಟ್ರವಾಗಿದೆ. ಗುಜರಾತಿನಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲದ್ದರಿಂದ ಸುಪ್ರೀಂ ಕೋರ್ಟು ಆಗ ಗುಜರಾತ್ ಗಲಭೆ ಮೊಕದ್ದಮೆಗಳನ್ನು ಮುಂಬಯಿಗೆ ವರ್ಗಾಯಿಸಿ ಆದೇಶ ನೀಡಿತ್ತು. ಸಿಆರ್‍ಪಿಸಿ ವಿಧಿಗಳಂತೆ ಬಿಡುಗಡೆಗೆ ಸರಕಾರವು ಶಿಕ್ಷೆ ನೀಡಿದ ಕೋರ್ಟಿನ ನ್ಯಾಯಾಧೀಶರ ಒಪ್ಪಿಗೆ ಪಡೆಯಲೇಬೇಕು. ಗುಜರಾತ್ ಸರಕಾರವು ಗೋದ್ರಾ ಇರುವ ಪಂಚಮಹಲ್ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರ ಅನುಮತಿ ಕೋರಿತ್ತು. ಅದು ಕಾನೂನು ಬಾಹಿರ ಎಂದು ಅವರು ವರದಿ ನೀಡಿದ್ದರು. ಆಮೇಲೆ ಅತ್ಯಾಚಾರಿಗಳು ದಾಹೋದ್ ಸೆರೆಮನೆಯಲ್ಲಿ ಇದ್ದುದರಿಂದ ದಾಹೋದ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ಅಭಿಪ್ರಾಯ ಕೇಳಿತ್ತು ಗುಜರಾತ್ ಸರಕಾರ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಆ ನ್ಯಾಯಾಲಯ ಸ್ಪಷ್ಟವಾಗಿ ಹೇಳಿತ್ತು. ಆದರೂ ಗುಜರಾತ್ ಸರಕಾರವು ಗುಜರಾತ್ ವಿಧಾನ ಸಭೆ ಚುನಾವಣೆ ವೇಳೆಗೆ ಶಿಕ್ಷಿತರನ್ನು ಬಿಡಿಸಿಕೊಂಡು ಮೆರವಣಿಗೆ ಮಾಡಿತ್ತು.

ಅವರನ್ನು ಚುನಾವಣೆಯಲ್ಲಿ ಬಳಸಿಕೊಂಡಿತ್ತು. ಬಿಜೆಪಿ ಇದ್ದರೆ ಬಾರಾ ಕೂನ್ ಮಾಫ್ ಎಂದೋ ಅಥವಾ ಭಯದ ವಾತಾವರಣಕ್ಕೋ ಬಿಜೆಪಿ ಮತ್ತೆ ಗುಜರಾತಿನಲ್ಲಿ ಅಧಿಕಾರಕ್ಕೆ ಬಂದಿತ್ತು. ಹಿಂದೆ ಇಲ್ಲಿ ಬಿಜೆಪಿ ಗೆದ್ದಾಗ ಕಾಂಗ್ರೆಸ್ ಪಡೆಯುತ್ತಿದ್ದ ಮತ ಪ್ರಮಾಣ ಸಮ ಹೋರಾಟದ್ದಾಗಿತ್ತು. ಕಳೆದ ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಪ್ರಮಾಣ ತೀರಾ ಕುಗ್ಗಿತ್ತು ಎನ್ನುವುದು ಗುಜರಾತಿನಲ್ಲಿ ರಾಜಕೀಯ ಅಪರಾಧದ ಬಂಧ ಹೇಗಿದೆ ಎಂಬುದನ್ನು ತಿಳಿಸಬಹುದಾಗಿದೆ. ಇಂದು ಕಾಂಗ್ರೆಸ್ ಸಹಿತ ಎಲ್ಲ ರಾಜ್ಯಕೀಯ ಪಕ್ಷಗಳ ಜನಪ್ರತಿನಿಧಿಗಳಲ್ಲಿ ಅರ್ಧಕ್ಕರ್ಧ ಜನ ಅಪರಾಧಿ ಹಿನ್ನೆಲೆಯವರು ಎನ್ನುವುದು ಭಾರತದ ಪ್ರಜಾಪ್ರಭುತ್ವಕ್ಕೆ ಹಿಡಿದ ಗ್ರಹಣವಾಗಿದೆ.
✍ ಬರಹ: ಪೇರೂರು ಜಾರು
