ಬೆಳ್ಳಾರೆ ಚರ್ಚ್‌ಗೆ ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನಾ ಭೇಟಿ
ಕ್ರೈಸ್ತರ ಕಪ್ಪು ದಿನ ಆಚರಣೆಯ ಸಮಯದಲ್ಲಿ ಪವಿತ್ರ ವಾರದ ಗುರುವಾರದಂದು ಯೇಸು ಕ್ರಿಸ್ತ ತನ್ನ 12 ಶಿಷ್ಯರ ಪಾದ ತೊಳೆಯುವ ಮೂಲಕ ಸರಳತೆಯನ್ನು ಮೆರೆದರು ಎನ್ನುವ ವಿಚಾರದಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನಾ ಅವರು ಸುಳ್ಯ ತಾಲೂಕಿನ ಬೆಳ್ಳಾರೆಯ ಹೋಲಿಕ್ರಾಸ್ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆಗಳಿಗೆ ಚಾಲನೆ ನೀಡಿದರು.
ಯೇಸು ಸ್ವಾಮಿ ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ಲೋಕಕ್ಕೆ ಪ್ರೀತಿ, ಮಾನವೀಯತೆ, ವಿನಮ್ರತೆ, ಸೇವೆ ಮುಂತಾದ ಮಾನವೀಯ ಮೌಲ್ಯಗಳನ್ನು ಸಾರಿದರು. ಕ್ರಿಸ್ತರು ಹೇಳಿದುದನ್ನು ಅವರ ಅನುಯಾಯಿಗಳಾದ ನಾವೆಲ್ಲರೂ ಭಕ್ತಿಪೂರ್ವಕ ಪಾಲಿಸಬೇಕಾಗಿದೆ. ಭಕ್ತಿ ಮತ್ತು ಪ್ರೀತಿಪೂರ್ವಕವಾಗಿ ಮಾಡಿದ ಸೇವೆಯು ಸರ್ವಶ್ರೇಷ್ಠವಾಗಿದೆ ಎಂದು ಬಿಷಪ್‌ರು ಸಂದೇಶ ನೀಡಿದರು.
ಈ ಸಂದರ್ಭ ಬೆಳ್ಳಾರೆ ಹೋಲಿಕ್ರಾಸ್‌ಚರ್ಚ್‌ನ ಧರ್ಮಗುರು ಫಾ. ಆಂಟನಿ ಪ್ರಕಾಶ್ ಮೊಂತೇರೊ ಪೂಜಾ ವಿಧಿಯಲ್ಲಿ ಉಪಸ್ಥಿತರಿದ್ದರು. ಪಂಜ ಚರ್ಚಿನ ಪ್ರಧಾನಗುರು ಫಾ.ಅಮಿತ್ ರೊಡ್ರಿಗಸ್ ಉಪಸ್ಥಿತರಿದ್ದರು. ಇದೇ ರೀತಿ ಮಂಗಳೂರು ಧರ್ಮಪ್ರಾಂತ್ಯದ ಎಲ್ಲ ಚರ್ಚ್‌ಗಳಲ್ಲಿ ಸಂಜೆ ಹೊತ್ತು ಪವಿತ್ರ ಗುರುವಾರದ ಆಚರಣೆಯಲ್ಲಿ ಯೇಸುವಿನ ಕೊನೆಯ ಭೋಜನದ ವಿಧಿವಿಧಾನಗಳು ಬಹಳ ಶ್ರದ್ಧಾ ಭಕ್ತಿಯಿಂದ ನಡೆಯಿತು.