ನಗರದತ್ತ ಮುಖ ಮಾಡಿ ಮೋಸ ಹೋದವರು

ಹಣ ನಗರಗಳಲ್ಲಿ ರಾಶಿ ಬಿದ್ದಿದೆಯೆಂದು ನಗರದತ್ತ ಮುಖ ಮಾಡಿರುವವರ ಸಂಖ್ಯೆ ಈಗ ಒಂದೇ ಸಮನೆ ಏರುತ್ತಿದೆ. ಪಾಶ್ಚಾತ್ಯ ದೇಶಗಳಲ್ಲಿ ನಗರದತ್ತ ಜನರ ವಲಸೆ ಕ್ರಿಸ್ತ ಪೂರ್ವದಿಂದಲೇ ಆರಂಭವಾಗಿದೆ. ಏಥನ್ಸ್, ರೋಮ್ ಇತ್ಯಾದಿ ನಗರಗಳು ಆ ಪಟ್ಟಿಯಲ್ಲಿ ಇವೆ. ಏಶಿಯಾದಲ್ಲಿ ಬ್ಯಾಬಿಲೋನ್, ಜೆರೂಸಲೇಮ್, ಆಫ್ರಿಕಾದಲ್ಲಿ ಕೈರೋ ಮೊದಲಾದ ನಗರಗಳು ಕ್ರಿಸ್ತಪೂರ್ವದಲ್ಲೇ ಜನ ವಲಸೆಯ ಇತಿಹಾಸ ಹೊಂದಿದವುಗಳಾಗಿವೆ. ಚೀನಾದಲ್ಲಿ ಬೀಜಿಂಗ್ ಸಹಿತ ಹಲವು ನಗರಗಳು ಈ ಪಟ್ಟಿಯಲ್ಲಿ ಬರುತ್ತವೆ. ಭಾರತದಲ್ಲಿ ಕ್ರಿಸ್ತ ಪೂರ್ವದಲ್ಲೇ ಜನರನ್ನು ಸೆಳೆದ ನಗರಗಳಲ್ಲಿ ಅಗ್ರ ಸ್ಥಾನ ಕಾಶಿ ಮತ್ತು ಪಾಟ್ನಾ ಇಲ್ಲವೇ ಪಾಟಲಿಪುತ್ರಗಳಿಗೆ ಇವೆ.


ಅಳಿದು ಹೋದ ಅದೆಷ್ಟೋ ನಗರಗಳು ಕೂಡ ಇತಿಹಾಸದಲ್ಲಿ ಇಣುಕಿ ಜನರಿಗೆ ಆಸರೆ ನೀಡಿ ಹಾಳು ಕೊಂಪೆಗಳಾದವುಗಳೂ ಇವೆ. ಕೆಲವು ಈಗಲೂ ಬದುಕುಳಿದಿವೆ. ಸಿರಿಯಾದ ಡಮಾಸ್ಕಸ್ 11,000 ವರುಷ ಹಳೆಯ ನಗರವಾಗಿದೆ. ಸಿರಿಯಾದ ಅಲೆಪ್ಪೋ ಕೂಡ 8,000 ವರುಷ ಹಳೆಯ ನಗರವಾಗಿದೆ. ಇವುಗಳಿಂದ ತಿಳಿದುಬರುವ ಸಂಗತಿ ಎಂದರೆ ಪಶ್ಚಿಮ ಏಶಿಯಾ ಮತ್ತು ಏಶಿಯಾ ಯೂರೂಪು ಖಂಡಗಳು ಸಂಧಿಸುವಲ್ಲಿ ಇಂತಾ ನಗರಗಳು ಆರಂಭದಲ್ಲೇ ಸುದ್ದಿ ಮತ್ತು ಸದ್ದು ಮಾಡಿದ್ದವು ಎನ್ನಬಹುದು. ಜೆರೂಸಲೇಮಿಗೆ ಹತ್ತರದಲ್ಲೇ ಜೆರಿಕೋ ಎಂಬ ಪಟ್ಟಣವು 9,000 ವರುಷದಷ್ಟು ಹಳೆಯದಾದರೂ ಅದು ಈಗ ಉಳಿದಿಲ್ಲ. ಇವುಗಳ ಪಟ್ಟಿ ಕೂಡ ಬಹು ದೊಡ್ಡದು. ತೀರಾ ಅನಂತರದ ಪೆಟ್ರಾ, ಅಮೆರಿಕದ ಮಾಚು ಪಿಚ್ಚುವರೆಗೆ ಇವೆಲ್ಲ ಹರಡಿಕೊಂಡಿವೆ.


ತುಳುನಾಡಿನ ಬಾರಕೂರು, ಕನ್ನಡನಾಡಿನ ಹಂಪಿ ಇಂದಿಗೂ ಉಳಿದಿವೆಯಾದರೂ ಹಳೆಯ ವೈಭವವನ್ನು ಉಳಿಸಿಕೊಂಡಿಲ್ಲ. ಇನ್ನೂ ಒಂದು ಬಗೆಯ ಅಳಿ ಉಳಿ ಇದೆ. ಬೀಜಿಂಗ್‍ನಲ್ಲಿ ಫಾರ್‍ಬಿಡನ್ ಸಿಟಿ ಇಂದು ಇದ್ದರೂ ಜನ ವಾಸದ್ದು ಅಲ್ಲ. ರೋಮ್‍ನಲ್ಲೂ ಅಂತಾ ಪ್ರದೇಶ ಇದೆ. ಹಳೆಯ ನಗರಗಳಲ್ಲಿ ಲೆಬನಾನಿನ ಬೈಬ್ಲೋಸ್ ಗ್ರೀಸಿನ ಏಥೆನ್ಸ್ 7,000 ವರುಷ ಹಿಂದಿನಿಂದಲೂ ಇರುವ ನಗರಗಳಾಗಿವೆ. ಇರಾನಿನ ಸೂಸಾ ಆರೂವರೆ ಸಾವಿರದಷ್ಟು ವರುಷ ಹಳೆಯ ನಗರವೆನಿಸಿದೆ. ಇರಾಕಿನ ಏರ್ಬಿಲ್, ಲೆಬನಾನಿನ ಸೈಡೋನ್, ಬಲ್ಗೇರಿಯಾದ ಪ್ಲೋವ್‍ಡಿವ್ ಈಗಲೂ ಇರುವ 6,000 ವರುಷ ಹಳೆಯ ನಗರಗಳಾಗಿವೆ.


ಭಾರತದ ಕಾಶಿ ಮತ್ತು ಪಾಟ್ನಾಗಳು ಈಗಲೂ ದೊಡ್ಡ ಜನಾಕರ್ಷಣೆಯ ನಗರಗಳಾಗಿಯೇ ನಿರಂತರ ಉಳಿದು ಬಂದಿವೆ. ಸಿಂಧೂ ನಾಗರಿಕತೆಗೆ ಸಂಬಂಧಿಸಿದ ಹರಪ್ಪಾ, ಮೊಹೆಂಜೊದಾರೊ, ಚೆನ್ನುದಾರೊ ಮೊದಲಾದವುಗಳು ಅವಶೇಷಗಳಾಗಿ ನಮಗೆ ತೋರಿ ಬರುವವುಗಳಾಗಿವೆ. ಅವು ಕೂಡ ಒಂದು ಕಾಲದಲ್ಲಿ ಜನ ಮನ ಸೆಳೆದ ನಗರಗಳಾಗಿವೆ. ಭಾರತದಲ್ಲಿ 2050ರ ಹೊತ್ತಿಗೆ ಹಳ್ಳಿ ಮತ್ತು ನಗರವಾಸಿಗಳ ಜನಸಂಖ್ಯೆಯು ಸರಿ ಸಮ ಆಗಲಿದೆ ಎಂಬುದು ಒಂದು ಲೆಕ್ಕಾಚಾರ. ಈ ರೀತಿ ನಗರ ವಲಸೆ ಆ ಕಾಲದಲ್ಲೂ ನಡೆದಿದೆ. ಈ ಕಾಲದಲ್ಲೂ ನಡೆಯುತ್ತಿದೆ. ಇದಕ್ಕೆ ಕಾರಣವೇನು. ಏನಾದರೊಂದು ಕೆಲಸ ಸಿಗುತ್ತದೆ; ಹೇಗಾದರೂ ಬದುಕುವುದು ಸಾಧ್ಯ ಎನ್ನುವುದು ಇದಕ್ಕೆ ಉತ್ತರ. ಹಳ್ಳಿಗಳಲ್ಲಿ ಬಹುತೇಕ ನಿಶ್ಚಿತ ಕೆಲಸ, ನಿಶ್ಚಿತವಾದ ಬದುಕು ಮಾತ್ರ ಇರುತ್ತದೆ.


ಆದರೆ ಈಗ ಹಳ್ಳಿಗಳಲ್ಲಿ ಏನಾದರೊಂದು ಕೆಲಸ ಸಿಗಬಹುದು. ನಗರಗಳನ್ನು ನಿರುದ್ಯೋಗ ಸಮಸ್ಯೆಯು ಆಳತೊಡಗಿದೆ. ಪ್ರಧಾನಿಗಳೇ ಪಕೋಡ ಮಾರಿ ಎಂದ ದೇಶವಿದು.ಇದನ್ನು ಸಕಾರಾತ್ಮಕವಾಗಿಯೂ ಕೂಡ ಸ್ವೀಕರಿಸಬಹುದು. ಇಂದು ನಗರಗಳಲ್ಲಿ ಮನೆಗಿಂತ ಹೊರಗಿನ ತಿಂಡಿಗಳನ್ನು ಅವಲಂಬಿಸಿರುವವರ ಸಂಖ್ಯೆಯು ಅಧಿಕವಾಗಿರುವುದರಿಂದ ಪಕೋಡ ಮಾರುವುದು ಕೂಡ ಒಂದು ಉದ್ಯೋಗ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಎಲ್ಲರೂ ಮಾಡುವ ಉದ್ಯೋಗ ಎಂದು ಹೇಳಲಾಗದು. ಕೆಲವರು ಮಾಡಬಹುದಾದ ಆ ಉದ್ಯೋಗವನ್ನು ಅನಿವಾರ್ಯವಾಗಿ ಕೂಡ ಕೆಲವರು ಆರಿಸಿಕೊಳ್ಳುವ ಸಂದರ್ಭ ಬರಬಹುದು. ಆದರೆ ಅದನ್ನು ನ್ಯಾಯಬದ್ಧ ಕೆಲಸ ಎಂದು ಹೇಳಲಿಕ್ಕಾಗುವುದಿಲ್ಲ.
ನಗರಗಳು ಎಂದ ಮೇಲೆ ಅತಿ ಸಿರಿವಂತ ನಗರಗಳ ಪಟ್ಟಿಯೇ ಇದೆ. ಸಾಮಾನ್ಯವಾಗಿ ಲಂಡನ್, ಸ್ಯಾನ್‍ಫ್ರಾನ್ಸಿಸ್ಕೋ, ಶಾಂಘೈ ನಗರಗಳನ್ನು ಜಗತ್ತಿನ ಮೊದಲ ಮೂರು ಸ್ಥಾನದ ಅತಿ ಸಿರಿವಂತ ನಗರಗಳು ಎಂದು ಹೇಳಲಾಗಿದೆ. ಕಳೆದ ಎರಡು ದಶಕದಲ್ಲಿ ಚೀನಾದಲ್ಲಿ ಅತಿ ಸಿರಿವಂತ ನಗರಗಳ ಸಂಖ್ಯೆ ಅಧಿಕರಿಸಿದೆ. ಅದರಲ್ಲಿ ಶಾಂಘೈ, ಬೀಜಿಂಗ್, ಹಾಂಗ್‍ಕಾಂಗ್ ಮೊದಲಾದವುಗಳು ಇವೆ. ಭಾರತದ ಆರ್ಥಿಕ ರಾಜಧಾನಿ ಎನಿಸಿದ ಮುಂಬಯಿ ಸಹ ಜಗತ್ತಿನ ಮೊದಲ ಹತ್ತು ಸಿರಿವಂತ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಲಂಡನ್, ಸ್ಯಾನ್‍ಫ್ರಾನ್ಸಿಸ್ಕೋ, ಶಾಂಘೈ, ಬೀಜಿಂಗ್, ಹಾಂಗ್‍ಕಾಂಗ್, ಸಿಂಗಾಪುರ್, ಜಿನೇವಾ, ಓಸ್ಲೋ, ನ್ಯೂಯಾರ್ಕ್, ಟೋಕಿಯೋ.


ಈ ಸಿರಿವಂತ ಎನ್ನುವಲ್ಲಿ ಇನ್ನೊಂದು ಪಟ್ಟಿ ಇದೆ. ಅದು ಏಕೆಂದರೆ ಲಂಡನ್ ಮೊದಲ ಸ್ಥಾನದಲ್ಲಿ ಇರುವುದು ಅಲ್ಲಿರುವ ಸಿರಿ ತುಂಬಿದ ವಸ್ತುಗಳಿಂದಾಗಿ. ಅವುಗಳಲ್ಲಿ ಹೆಚ್ಚಿನವು ಸ್ಥಿರ ಸ್ವತ್ತುಗಳು. ಸ್ಥಿರ ಸಿರಿವಂತಿಕೆಯು ಸದಾ ಬಳಕೆಯಲ್ಲಿ ಇರುವ ಸಂಪತ್ತು ಅಲ್ಲ. ಉದಾಹರಣೆಗೆ ಅರಮನೆ, ಬಂಗಾರ ಇವನ್ನೆಲ್ಲ ಸಂಪತ್ತು ಎನ್ನಬಹುದು ಹೊರತು ಸಿರಿ ಎಂದು ಹೇಳಲಾಗದು. ಅದರಲ್ಲೂ ಅರಮನೆ, ಬಂಗಾರ ಮಾರಲಾಗದ್ದಾದರೆ ಅದನ್ನು ಮೃತ ಸಂಪತ್ತು ಎಂದು ಕೂಡ ಹೇಳಬಹುದು. ಆದ್ದರಿಂದ ರಿಚೆಸ್ಟ್ ಎಂದರೆ ಸಿರಿವಂತ ಬದಲು ವೆಲ್ದಿಯೆಸ್ಟ್ ಎಂದರೆ ಸಂಪದ್ಭರಿತ ದೇಶಗಳ ಪಟ್ಟಿಯನ್ನು ಬೇರೆಯೇ ಮಾಡಲಾಗಿದೆ. ಇಲ್ಲಿನ ಸಂಪತ್ತು ಹೆಚ್ಚಿನದು ಜನ ಬಳಕೆಯಲ್ಲಿ ಇರುತ್ತದೆ. ಅದು ಬಳಸಲಾಗದ ಸಂಪತ್ತು ಆಗಿರುವುದಿಲ್ಲ.
ಆ ಪಟ್ಟಿಯಲ್ಲೂ ಭಾರತದ ಯಾವ ನಗರವೂ ಇಲ್ಲ. ಮೊದಲ ಹತ್ತು ಸ್ಥಾನಗಳಲ್ಲಿ ಇರುವ ಸಂಪದ್ಭರಿತ ನಗರಗಳೆಂದರೆ ಟೋಕಿಯೋ, ನ್ಯೂಯಾರ್ಕ್, ಲಂಡನ್, ಸ್ಯಾನ್‍ಫ್ರಾನ್ಸಿಸ್ಕೋ, ಶಾಂಘೈ, ಬೀಜಿಂಗ್, ಹಾಂಗ್‍ಕಾಂಗ್, ಸಿಂಗಾಪುರ, ಜಿನೇವಾ, ಓಸ್ಲೋ. ಈ ಹತ್ತರಲ್ಲಿ ಆಫ್ರಿಕಾ, ತೆಂಕಣ ಅಮೆರಿಕ, ಆಸ್ಟ್ರೇಲಿಯಾ ಸಾಗರೋತ್ತರ ಖಂಡಗಳ ನಗರಗಳು ಯಾವುದೂ ಸ್ಥಾನ ಪಡೆದಿಲ್ಲ. ಟೋಕಿಯೋ ನಗರದಲ್ಲಿ ಬಳಸದುಳಿಯಬಹುದಾದ ಸ್ಥಿರ ಸ್ವತ್ತುಗಳು ತೀರಾ ಕಡಿಮೆ ಎನ್ನಲಾಗಿದೆ.


ಇನ್ನು ನಗರದತ್ತ ಎಂದಾಗ ಅದು ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ತುಳುನಾಡಿನವರು ಒಂದೂ ಕಾಲು ಶತಮಾನದಿಂದ ಹೆಚ್ಚಾಗಿ ಉದ್ಯೋಗ ಅರಸಿ ಮುಂಬಯಿಗೆ ಹೋಗುತ್ತಿದ್ದರು. ಆ ಪ್ರಮಾಣ ಈಗ ಹೋಗುವವರಲ್ಲೂ ಕಡಿಮೆಯಾಗಿದೆ. ಹಾಗೂ ಅಲ್ಲಿ ಉದ್ಯೋಗದ ಖಚಿತತೆಯ ಪ್ರಮಾಣವೂ ಕರಾವಳಿಯವರಿಗೆ ಕಡಿಮೆಯಾಗಿದೆ.


ಎಪ್ಪತ್ತರ ದಶಕದಲ್ಲಿ ಕರಾವಳಿಯವರು ಕುವೈತ್‍ಗೆ ಕೆಲಸ ಅರಸಿ ಹೋಗತೊಡಗಿದರು. ಅನಂತರ ಅದು ಕತಾರ್, ಬಹರೇನ್ ಎಂದು ಕೊಲ್ಲಿ ದೇಶಗಳೆಲ್ಲವನ್ನೂ ಆವರಿಸಿಕೊಂಡಿತು. ಅನಂತರ ದುಬಾಯಿಯು ತುಳುನಾಡವರಿಗೆ ಇನ್ನೊಂದು ಮುಂಬಯಿ ಎನ್ನಲಾಯಿತು. ಆದರೆ ಈಗ ಕೊಲ್ಲಿ ದೇಶಗಳಲ್ಲಿ ಕೂಡ ಅವಕಾಶಗಳು ಕಡಿಮೆ ಆಗಿವೆ. ಹಾಗಾಗಿ ಹೋಗುವವರ ಆಸಕ್ತಿಯೂ ಕಡಿಮೆ ಆಗಿವೆ. ಒಂದು ಕೆಲಸಕ್ಕೆ ಕರೆದುಕೊಂಡು ಹೋಗಿ ಇನ್ನೊಂದು ಕೆಲಸಕ್ಕೆ ದೂಡುವ ಜಾಲಗಳು ನಗರವಾಸಿಗಳ ಕೆಲವು ಮೋಸಗಳನ್ನು ತೆರೆದಿಟ್ಟಿದ್ದು, ನಗರದತ್ತ ಓಡುವವರ ಕಾಲಿಗೆ ಒಂದಷ್ಟು ಲಗಾಮು ಹಾಕಿದೆ.

Related Posts

Leave a Reply

Your email address will not be published.