ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮೋಸ – ಕಾರ್ಖಾನೆಗೆ 14 ಕೋಟಿ ರೂಪಾಯಿಗೂ ಹೆಚ್ಚು ನಷ್ಟ
ಹಂದಾಡಿ ಪಂಚಾಯತ್ ಬೈಕಾಡಿಯಲ್ಲಿರುವ ಬ್ರಹ್ಮಾವರ ಸಹಕಾರ ಸಕ್ಕರೆ ಕಾರ್ಖಾನೆಯ ಚರ ಸ್ಥಿರ ಆಸ್ತಿಗಳನ್ನು ನಾನಾ ಬಗೆಯಲ್ಲಿ ವಂಚಿಸಿ ವಿಲೇವಾರಿ ಮಾಡಿ ಕಾರ್ಖಾನೆಗೆ 14 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟು ಮಾಡಿದ ಬಿಜೆಪಿ ನಾಯಕ ಸುಪ್ರಸಾದ ಶೆಟ್ಟಿ ಸೇರಿ 18 ಮಂದಿ ಆರೋಪಿಗಳಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿ ಅವರ ಅರ್ಜಿ ವಜಾ ಮಾಡಿತು.
ಉಡುಪಿ ಜಿಲ್ಲಾ ರೈತ ಸಂಘದ ಸತೀಶ ಕಿಣಿ ಅವರು ಈ ಮೋಸದ ಬಗೆಗೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯವು ತನಿಖೆ ನಡೆಸುವಂತೆ ಬ್ರಹ್ಮಾವರ ಪೋಲೀಸು ಠಾಣೆಗೆ ಆದೇಶ ನೀಡಿತ್ತು. ಅದರಂತೆ 25 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆಗ ಮುಖ್ಯ ಆರೋಪಿ ಸುಪ್ರಸಾದ ಶೆಟ್ಟಿ ಮತ್ತು ಕೆಲರು ತಲೆಮರೆಸಿಕೊಂಡಿದ್ದರು. ಬಂಧನ ತಪ್ಪಿಸಿಕೊಳ್ಳಲು 18 ಮಂದಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು.
ಬಿಜೆಪಿ ಸರಕಾರದ ಅವಧಿಯ ನೇಮಕದ ಸದರಿ ಸಹಕಾರಿ ಸಕ್ಕರೆ ಕಾರ್ಖಾನೆಯ ಹಾಲಿ ಅಧ್ಯಕ್ಷ ಸುಪ್ರಸಾದ ಶೆಟ್ಟಿ, ಉಪಾಧ್ಯಕ್ಷ ಉಮಾನಾಥ ಶೆಟ್ಟಿ, ನಿರ್ದೇಶಕರುಗಳಾದ ಆಸ್ತಿಕ ಶಾಸ್ತ್ರಿ, ಸುಬ್ಬ ಬಿಲ್ಲವ, ಸಂತೋಷ ಶೆಟ್ಟಿ, ಸನ್ಮತ್ ಹೆಗ್ಡೆ, ರತ್ನಾಕರ ಗಾಣಿಗ, ವಾಸಂತಿ ಶೆಟ್ಟಿ, ಗೀತಾ ಪೂಜಾರಿ, ಕಾರ್ಖಾನೆಯ ಸಿಬ್ಬಂದಿಗಳಾದ ಗೋಪಾಲಕೃಷ್ಣ, ರಮಾನಂದ ನೀಲಾವರ, ಉದಯ ಆಚಾರ್, ರಾನಿ ಡಿಸೋಜಾ, ಶಂಕರ್, ಪದ್ಮನಾಭ, ವಿಶ್ವನಾಥ ಶೆಟ್ಟಿ, ಗಣೇಶ ಪೂಜಾರಿ ಇವರೆಲ್ಲರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಈಗ ಎಲ್ಲರೂ ಬಂಧನದ ಅಪಾಯ ಎದುರಿಸುತ್ತಿದ್ದಾರೆ.