ಕೇಂದ್ರ ಬಜೆಟ್ : 2047ಕ್ಕೆ ಅರಳಲಿದೆ ವಿಕಸಿತ್ ಭಾರತ್ ಆಶ್ವಾಸನೆ
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದ ಮೂಲಕ ಬಿಜೆಪಿ ಒಕ್ಕೂಟ ಸರಕಾರದ ಜನಪರ ಯೋಜನೆಗಳು ದೇಶದ ಮೂಲೆ ಮೂಲೆಗೆ ತಲುಪಿದೆ ಎಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಹೇಳುವುದರ ಮೂಲಕ ಚುನಾವಣಾ ಪೂರ್ವ ತಾತ್ಕಾಲಿಕ ಬಜೆಟ್ ಮಂಡಿಸಿದರು. 2047ಕ್ಕೆ ವಿಕಸಿತ ಭಾರತ್ ಅರಳಲು ತಮ್ಮ ಬಜೆಟ್ ಸಹಾಯಕ ಎಂದು ಅವರು ಹೇಳಿದರು.
ತಾತ್ಕಾಲಿಕ ಬಜೆಟ್ಟಿನ ಕೆಲವು ಮುಖ್ಯಾಂಶಗಳು ಮುಂದಿನಂತಿವೆ. ದೇಶದ ಜನರು ನಮಗೆ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಕಳೆದ ಹತ್ತು ವರುಷಗಳಿಂದ ಭಾರತದ ಆರ್ಥಿಕತೆ ಬಹಳಷ್ಟು ಬದಲಾಗಿದೆ. ಪಿಎಂ ಜನ್‌ಧನ್ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಒಟ್ಟು 24 ಕೋಟಿ ರೂಪಾಯಿ ನೇರ ವರ್ಗಾವಣೆ. ಪಿಎಂ ಸ್ವನಿದಿ ಯೋಜನೆ ಯಶಸ್ವಿಯಾಗಿದೆ. ನಮ್ಮ ಸರಕಾರ ರೈತರ ಶ್ರೇಯೋಭಿವೃದ್ಧಿಗೆ ದುಡಿದಿದೆ. ರೈತರು ನಮಗೆ ಅನ್ನದಾತರು. ಅತಿ ಸಣ್ಣ ರೈತರು ಮತ್ತು ಕುಶಲ ಕರ್ಮಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ದೇಶದೆಲ್ಲೆಡೆ 390 ವಿಶ್ವವಿದ್ಯಾನಿಲಯಗಳನ್ನು ಕೇಂದ್ರ ಸರಕಾರ ಸ್ಥಾಪಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ 43 ಕೋಟಿ ರೂಪಾಯಿ ಸಾಲ ಸೌಲಭ್ಯ ಒದಗಿಸಲಾಗಿದೆ; ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ನಮ್ಮ ಆಡಳಿತದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಮುದ್ರಾ ಯೋಜನೆಯಡಿ 43 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಕ್ರಮವಾಗಿ 7 ಮತ್ತು 16 ಹೊಸ ಐಐಟಿ, ಐಐಐಟಿಗಳನ್ನು ತೆರೆಯಲಾಗಿದೆ. ಯುವಕರನ್ನು ಸದೃಢರಾಗಿಸುವುದು ನಮ್ಮ ಸರಕಾರದ ಆದ್ಯತೆಯ ಕೆಲಸ. ಮೂರು ವರುಷದಲ್ಲಿ ಮಹಿಳೆಯರಿಗೆ ಮೂರು ಕೋಟಿ ಮನೆ ನಿರ್ಮಾಣ, ಒಂದು ಕೋಟಿ ಮನೆಗೆ ಸೋಲಾರ್ ಪ್ಯಾನೆಲ್ ಅಳವಡಿಕೆ. ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ. ಮೀನುಗಾರಿಕೆಗೆ ಹೊಸ ಸಚಿವಾಲಯದ ಆಶ್ವಾಸನೆ ಸಹ ಈ ಬಜೆಟ್‌ನಲ್ಲಿದೆ.
ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ನಮ್ಮ ಮುಖ್ಯ ಘೋಷಣೆ ಆಗಿದೆ. ಮೂರು ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ಮಾಡುವ ಗುರಿ, ಒಂದು ಕೋಟಿ ಗುರಿ ಸಾಧನೆ ಆಗಿದೆ. 7 ಲಕ್ಷ ಆದಾಯದವರಗೆ ತೆರಿಗೆ ಪಾವತಿ ಅಗತ್ಯವಿಲ್ಲ. ಉಡಾನ್ ಯೋಜನೆ ಬಡವರೆಲ್ಲ ವಿಮಾನ ಪ್ರಯಾಣ ಮಾಡುವಂತೆ ಮಾಡಿದೆ. ನೂರಾರು ತಾತ್ಕಾಲಿಕ ವಿಮಾನ ನಿಲ್ದಾಣಗಳನ್ನು ಸಣ್ಣ ವಿಮಾನ ನಿಲ್ದಾಣಗಳಾಗಿ ಅಭಿವೃದ್ಧಿ ಪಡಿಸಲಾಗಿದೆ. ಮೆಟ್ರೋ, ನಮೋ ಭಾರತ್ ರೈಲು ವಿಸ್ತರಿಸಲಾಗಿದೆ. ಲಕ್ಷದ್ವೀಪ ಅಭಿವೃದ್ಧಿ ನಿರ್ಧರಿಸಲಾಗಿದೆ. ಪ್ರವಾಸೋದ್ಯಮಕ್ಕೆ 75 ಕೋಟಿ ರೂಪಾಯಿ ಮೀಸಲಿಡಲಾಗಿದೆ. 5.8% ವಾರ್ಷಿಕ ಕೊರತೆ ಬಜೆಟ್ ಇದಾಗಿದ್ದು ನಾನಾ ಮೂಲಗಳಿಂದ ಅದನ್ನು ಸರಿಹೊಂದಿಸಲು ಪ್ರಯತ್ನಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.