ಕೊಲೆಸ್ಟ್ರಾಲ್‍ಗೆ ಬಂದಿದೆ ಬ್ರಹ್ಮಾಸ್ತ್ರ

ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ಹಠಾತ್ ಹೃದಯಾಘಾತ ಹೆಚ್ಚು ಹೆಚ್ಚು ಕಂಡು ಬರುತ್ತಿದೆ. ಧೂಮಪಾನ ಮದ್ಯಪಾನ ಮಿಶ್ರಿತ ಮೋಜಿನ ಜೀವನಶೈಲಿ, ಅನಿಯಂತ್ರಿತ ಹಾಗೂ ಅಸಮರ್ಪಕ ಆಹಾರ, ದೈಹಿಕ ವ್ಯಾಯಾಮವಿಲ್ಲದ ಆಲಸೀ ಜೀವನ, ಕೆಲಸದ ಒತ್ತಡ, ಜಂಕ್ ಆಹಾರ ಸೇವನೆ ಹಾಗೂ ಇನ್ನಿತರ ಕಾರಣಗಳಿಂದ ಹದಿಹರೆಯದ ಮಕ್ಕಳಲ್ಲಿ ಮತ್ತು ಯುವಕರ ಕೊಲೆಸ್ಟ್ರಾಲ್ ಪ್ರಮಾಣ ಏರುತ್ತಲೇ ಇದೆ. ಈ ಹೆಚ್ಚಿದ ಕೊಲೆಸ್ಟ್ರಾಲ್ ನಮ್ಮ ಹಿತಶತ್ರು ಆಗಿದ್ದು, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ದೇಹದಲ್ಲಿ ಶೇಖರಣೆಗೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಕೊಲೆಸ್ಟ್ರಾಲ್ ಎನ್ನುವುದು ಒಂದು ರೀತಿಯ ಮೇಣದಂತಹ ವಸ್ತುವಾಗಿದ್ದು, ನಮ್ಮ ದೇಹದ ಜೀವಕೋಶಗಳ ಬೆಳವಣಿಗೆಗೆ, ಜೈವಿಕ ಕ್ರಿಯೆಗಳಿಗೆ, ವಿಟಮಿನ್ ಉತ್ಪಾದನೆಗೆ ಅತೀ ಅವಶ್ಯಕ. ಹಿತಮಿತವಾದ ಕೊಲೆಸ್ಟ್ರಾಲ್ ದೇಹಕ್ಕೆ ಅತ್ಯಗತ್ಯ. ಆದರೆ ಅಧಿಕ ಪ್ರಮಾಣ ರಕ್ತದಲ್ಲಿ ಸೇರಿದರೆ ತೊಂದರೆ ನಿಶ್ಚಿತ. ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಎರಡು ಮೂಲಗಳಿಂದ ದೊರಕುತ್ತದೆ. ಒಂದು ನಾವು ತಿನ್ನುವ ಆಹಾರದಿಂದ ಮತ್ತು ಇನ್ನೊಂದು ನಮ್ಮ ದೇಹದಲ್ಲಿ ಲಿವರ್ ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್‍ಗಳನ್ನು ತಾನೇ ತಯಾರಿಸುತ್ತದೆ. ಆಹಾರದಿಂದ ಸಿಗುವ ಕೊಲೆಸ್ಟ್ರಾಲ್ ಹೆಚ್ಚಾಗಿ ಕರಿದ ತಿಂಡಿ, ಎಣ್ಣೆ ಪದಾರ್ಥ, ಮಾಂಸ, ಕೋಳಿಪದಾರ್ಥ ಮತ್ತು ಡೈರಿ ಉತ್ಪನ್ನಗಳಿಂದ ಬರುತ್ತದೆ. ಈ ಬಾಹ್ಯ ಮೂಲದಿಂದ ಸಿಗುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಮಾರಕ ಎಂದು ತಿಳಿದುಬಂದಿದೆ. ಈ ಕೊಲೆಸ್ಟ್ರಾಲ್‍ನಲ್ಲಿ ಎರಡು ವಿಧಗಳಿದ್ದು, ಒಳ್ಳೆ ಕೊಲೆಸ್ಟ್ರಾಲ್ ಅಥವಾ ಅಧಿಕ ಸಾಂದ್ರತೆ ಇರುವ ಕೊಲೆಸ್ಟ್ರಾಲ್ (HDL) ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಕಡಿಮೆ ಸಾಂದ್ರತೆ ಇರುವ ಕೊಲೆಸ್ಟ್ರಾಲ್ ಎಂದು ವಿಂಗಡಿಸಲಾಗಿದೆ. ನಮ್ಮ ದೇಹÀದ ರಕ್ತದಲ್ಲಿ LDL ಪ್ರಮಾಣ ಜಾಸ್ತಿಯಾಗಿ HDL ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾದಾಗ ದೇಹದಲ್ಲಿನ ಕೊಲೆಸ್ಟ್ರಾಲ್ ರಕ್ತದಲ್ಲಿನ ಇತರ ವಸ್ತುಗಳ ಜೊತೆ ಸೇರಿಕೊಂಡು ರಕ್ತನಾಳದ ಒಳಗೆ ಗಟ್ಟಿಯಾದ ಪ್ಲಾಖ್ ಆಗಿ ಪರಿವರ್ತನೆಯಾಗಿ, ಸರಾಗ ರಕ್ತ ಸಂಚಲನೆಗೆ ಅಡ್ಡಿ ಮಾಡುತ್ತದೆÉ. ರಕ್ತನಾಳ ಕಿರಿದಾಗಿ ಅದರಲ್ಲಿ ರಕ್ತ ಪರಿಚಲನೆಗೆ ತೊಡಕಾಗಿ ಅಥೆರೋ ಸ್ಲಿರೋಸಿಸ್ ಎಂಬ ರೋಗಕ್ಕೆ ನಾಂದಿ ಹಾಡುತ್ತದೆ. ಕಾರಣಾಂತರಗಳಿಂದ ರಕ್ತನಾಳದೊಳಗೆ ರಕ್ತಹೆಪ್ಪುಗಟ್ಟಿಕೊಂಡು ಈ ರಕ್ತನಾಳದೊಳಗಿನ ಪ್ಲಾಖ್‍ಗಳಿಗೆ ಸೇರಿಕೊಂಡಲ್ಲಿ ಮೊದಲೇ ಕಿರಿದಾದ ರಕ್ತನಾಳದಲ್ಲಿ ರಕ್ತ ಪರಿಚಲನೆ ನಿಂತು ರೋಗಿಗೆ ಹೃದಯಾಘಾತ ಅಥವಾ ಸ್ಟ್ರೋಕ್ ಉಂಟಾಗುತ್ತದೆ. ಈ ಕಾರಣಕ್ಕಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಣವಾಗಲೇ ಬೇಕು. LDL ಪ್ರಮಾಣ ಕಡಿಮೆ ಇರಬೇಕು. HDL ಪ್ರಮಾಣ ಹೆಚ್ಚು ಇರಬೇಕು. ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿ ಇರುವುದನ್ನು ಹೈಪರ್ ಲಿಪಿಡೋಮಿಯಾ ಎನ್ನುತ್ತಾರೆ ಅಥವಾ ಡಿಸ್ ಲಿಪಿಡೇಮಿಯಾ ಅಂತಲೂ ಕರೆಯುತ್ತಾರೆ. ನಮ್ಮ ಭಾರತ ದೇಶದಲ್ಲಿ 70 ಶೇಕಡಾ ಮಂದಿ ಈ ಹೈಪರ್ ಲಿಪಿಡೇಮಿಯಾದಿಂದ ಬಳಲುತ್ತಾರೆ. 2008ರ ವಿಶ್ವ ಸಂಸ್ಥೆ ವರದಿ ಪ್ರಕಾರ ವಿಶ್ವದಾದ್ಯಂತ 39 ಶೇಕಡಾ ಮಂದಿ ಹೈಪರ್ ಲಿಪಿಡೆಮಿಯಾದಿಂದ ಬಳಲುತ್ತಿದ್ದಾರೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹೇಗೆ?
1) ನಿರಂತರ ದೈಹಿಕ ವ್ಯಾಯಾಮ ಮತ್ತು ದೇಹದ ತೂಕದ ನಿಯಂತ್ರಣ. ಕನಿಷ್ಟ ಒಂದು ಗಂಟೆಗಳ ಕಾಲ ದೈಹಿಕ ವ್ಯಾಯಾಮಗಳಾದ ವಾಕಿಂಗ್, ಬಿರುಸುನಡಿಗೆ, ಸ್ವಿಮ್ಮಿಂಗ್, ಯೋಗ, ಸೈಕ್ಲಿಂಗ್ ಮಾಡಬೇಕು.
2) ಚಟಗಳ ನಿಯಂತ್ರಣ: ಧೂಮಪಾನದಿಂದ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತದೆ. ಮದ್ಯಪಾನ ಕೂಡಾ ಹೈಪರ್ ಲಿಪಿಡೆಮಿಯಾಕ್ಕೆ ಪರೋಕ್ಷವಾಗಿ ಕಾರಣವಾಗುತ್ತದೆ.
3) ಆಹಾರ ನಿಯಂತ್ರಣ : ಕೊಬ್ಬು ಹೆಚ್ಚಿರುವ ಮತ್ತು ಕರಿದ ಆಹಾರ ನಿಲ್ಲಿಸಬೇಕು. ಹಸಿ ತರಕಾರಿ, ಹಣ್ಣುಹಂಪಲು, ಸಸ್ಯಾಹಾರ ಹೆಚ್ಚು ಸೇವಿಸಬೇಕು. ಮಾಂಸಾಹಾರ ಕಡಿಮೆ ಮಾಡಬೇಕು.
4) ಔಷಧಿ ಸೇವನೆ: ಸ್ಟಾಟಿನ್ ಎಂಬ ಔಷಧಿಯನ್ನು ನೀಡಿ ದೇಹದಲ್ಲಿನ LDL ಕೊಲೆಸ್ಟ್ರಾಲ್‍ನ್ನು ಕಡಿಮೆ ಮಾಡಲಾಗುತ್ತದೆ. ಈ ಔಷಧಿ ನಿರಂತರವಾಗಿ ತೆಗೆದುಕೊಳ್ಳಲೇಬೇಕಾಗುತ್ತದೆ. ಈ ಔಷಧಿ ಬಹಳ ನಿಧಾನವಾಗಿ ಕ್ರಿಯಾಶೀಲವಾಗುತ್ತದೆ. ಹಲವು ವರುಷಗಳ ಕಾಲ ಸೇವಿಸಬೇಕಾಗುತ್ತದೆ. ಒಮ್ಮೆ ಆರಂಭಿಸಿದ ಬಳಿಕ ನಿರಂತರವಾಗಿ ಸೇವನೆ ಮಾಡಲೇಬೇಕು.
ಏನಿದು ಬ್ರಹ್ಮಾಸ್ತ್ರ?
ಇತ್ತೀಚಿನ ಸಂಶೋಧನೆಗಳ ಪ್ರಕಾರ ಇದೀಗ ಮಾರುಕಟ್ಟೆಗೆ ‘ಇನ್‍ಕ್ಲಿಸಿರಾನ್‘ ಎಂಬ ಹೊಸತಾದ ಚುಚ್ಚುಮದ್ದು ಬಂದಿದೆ. ಇದನ್ನು ವರ್ಷಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು. ಈ ಚುಚ್ಚು ಮದ್ದು ನೇರವಾಗಿ ರಕ್ತದಲ್ಲಿನ LDL ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದೊಂದು ವರ್ಣತಂತುವನ್ನೇ ನಿಯಂತ್ರಿಸುವ ಔಷಧಿಯಾಗಿದ್ದು, PCSK9 ಎಂಬ ವರ್ಣತಂತುವನ್ನು ನಿಶ್ಯಕ್ತಗೊಳಿಸಿ ಲಿವರ್‍ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಈ ವರ್ಣತಂತು ನಿಶ್ಯಕ್ತವಾದಾಗ ಯಕೃತ್ತು ಬಹಳ ಸುಲಭವಾಗಿ LDL ಕೊಲೆಸ್ಟ್ರಾಲ್‍ನ್ನು ರಕ್ತದಿಂದ ಹೊರಹಾಕುತ್ತದೆ. ಒಮ್ಮೆ ಇಂಜೆಕ್ಷನ್ ಕೊಟ್ಟ ಬಳಿಕ ಮೂರು ತಿಂಗಳ ಬಳಿಕ ಮತ್ತೊಂದು ಇಂಜೆಕ್ಷನ್ ನೀಡಲಾಗುತ್ತದೆ. ಆ ಬಳಿಕ ವರ್ಷಕ್ಕೆ ಎರಡು ಬಾರಿ ನೀಡಬೇಕಾಗುತ್ತದೆ. ಇದೊಂದು ಮೊದಲೇ ಸಿದ್ದಪಡಿಸಿದ ಸಿರಿಂಜ್‍ನಲ್ಲಿ ದೊರಕುತ್ತದೆ. ಪ್ರತಿ ಸಿರಿಂಜಿನಲ್ಲಿ 284 mg ‘ಇನ್‍ಕ್ಲಿಸಿರಾನ್‘ ಔಷಧಿ ಇರುತ್ತದೆ. ಎರಡು ವರ್ಷಗಳ ಹಿಂದೆ ಅಮೆರಿಕಾ ಮತ್ತು ಇಂಗ್ಲೆಂಡ್‍ನ ಇದರ ಬಳಕೆÉಗೆ ಅನುಮತಿ ಲಭ್ಯವಾಗಿದೆ. ಅಲ್ಲಿನ ಅಂಕಿ ಅಂಶಗಳ ಪ್ರಕಾರ ಕೊಲೆಸ್ಟ್ರಾಲ್ ಪ್ರಮಾಣ ಸುಮಾರು 50% ಶೇಕಡಾದಷ್ಟು ಕುಸಿತವಾಗಿದೆ ಮತ್ತು ಹೃದಯಾಘಾತ ಪ್ರಮಾಣ ಕುಂಟಿಸಿದೆ ಎಂದು ತಿಳಿದುಬಂದಿದೆ.
ಯಾರಿಗೆ ಅಗತ್ಯವಿದೆ
1) ದೇಹದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗಿ ಸ್ಟಾಟಿನ್ ಔಷಧಿ ಬಳಸಿದ ಬಳಿಕವೂ ನಿಯಂತ್ರಣಕ್ಕೆ ಬರದೇ ಇದ್ದಾಗ, ಈ ಇನ್‍ಕ್ಲಿಸಿರಾನ್ ಚುಚ್ಚುಮದ್ದು ನೀಡಬಹುದಾಗಿದೆ.
2) ಹೃದಯಾಘಾತದ ಕೌಟುಂಬಿಕ ಚರಿತ್ರೆ ಇರುವವರು ಮತ್ತು ಪದೇ ಪದೇ ಹೃದಯಾಘಾತ ಆಗುತ್ತಿದ್ದಲ್ಲಿ ಈ ಚುಚ್ಚುಮದ್ದು ಅತೀ ಉಪಯುಕ್ತ.
3) ಅಧಿಕ ದೇಹದ ತೂಕ, ಅಧಿಕ ದೇಹದ ಬೊಜ್ಜು, ಯಾವುದೇ ರೀತಿಯಲ್ಲಿ ನಿಯಂತ್ರಿಸಲು ಬಾರದ ಕೊಲೆಸ್ಟ್ರಾಲ್ ಮುಂತಾದ ಸಂದರ್ಭಗಳಲ್ಲಿ ಈ ಚುಚ್ಚು ಮದ್ದು ನೀಡುವುದು ಸೂಕ್ತ.
4) ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸ್ಟಾಟಿನ್ ಔಷಧಿ ಸೇವಿಸಿ ಅಡ್ಡ ಪರಿಣಾಮ ಉಂಟಾದಲ್ಲಿ ಈ ಚುಚ್ಚುಮದ್ದು ನೀಡಬಹುದು. ಅದೇ ರೀತಿ ಸ್ಟಾಟಿನ್ ಔಷಧಿಗೆ ಅಲರ್ಜಿ ಇದ್ದಲ್ಲಿ ಈ ಚುಚ್ಚುಮದ್ದು ರಾಮಬಾಣ ಎಂದೂ ತಿಳಿದು ಬಂದಿದೆ.
ಅಡ್ಡಪರಿಣಾಮ ಏನು?
1) ಇಂಜೆಕ್ಷನ್ ನೀಡಿದ ಜಾಗದಲ್ಲಿ ನೋವು ಉರಿಯೂತ, ತುರಿಕೆ ಉಂಟಾಗಬಹುದು.
2) ಇಂಜೆಕ್ಷನ್ ನೀಡಿದ ಜಾಗದ ಸ್ನಾಯು ಸೆಳೆತ ಮತ್ತು ನೋವು ಇರಬಹುದು.
3) ತಲೆನೋವು
4) ಇನ್‍ಕ್ಲಿಸಿರಾನ್ ಚುಚ್ಚುಮದ್ದು ನೀಡಿದ ಬಳಿಕ ಮೂಗಿನಲ್ಲಿ ಶೀತ, ಉರಿಯೂತ ಮತ್ತು ಮೂಗು ಕಟ್ಟಿದಂತೆ ಭಾಸವಾಗಬಹುದು.
ಖರ್ಚು ಎಷ್ಟಾಗುತ್ತದೆ?
ಎರಡು ವರ್ಷಗಳ ಹಿಂದೆ ಇಂಗ್ಲೆಂಡ್ ಮತ್ತು ಅಮೆರಿಕಾದಲ್ಲಿ ಎರಡು ಚುಚ್ಚುಮದ್ದಿಗೆ ಸುಮಾರು 5 ಲಕ್ಷ ಖರ್ಚಾಗುತ್ತಿತ್ತು. ನಮ್ಮ ಭಾರತದಲ್ಲಿ ಈಗ ಈ ಚುಚ್ಚು ಮದ್ದಿಗೆ ಕನಿಷ್ಟ 1.25ರಿಂದ 1.5 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಅದೇನೇ ಇರಲಿ ನಿಮ್ಮ LDL ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೀವು ಕನಿಷ್ಟ 2.5 ರಿಂದ 3 ಲಕ್ಷ ಖರ್ಚು ಪ್ರತಿ ವರ್ಷ ಮಾಡಲು ಸಿದ್ದರಾಗಿರಬೇಕು.
ಕೊನೆಮಾತು:
ಸ್ವಿಜರ್‍ಲ್ಯಾಂಡ್ ಒಡೆತನದ ಪಾರ್ಮಾ ಕಂಪೆನಿ ನೊವಾರ್‍ಟಿಸ್ ಈ ಇನ್‍ಕ್ಲಿಸಿರಾನ್ ಚುಚ್ಚುಮದ್ದನ್ನು ‘ಸಿಂಬ್ರ್ರಾವ’ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ತಂದಿರುತ್ತಾರೆ. ಚರ್ಮದ ಕೆಳಗೆ ನೀಡುವ ಈ ಇಂಜೆಕ್ಷನ್‍ನ್ನು ಹೊಟ್ಟೆಭಾಗ, ತೊಡೆಭಾಗ ಮತ್ತು ಕೈಗಳ ಬದಿಯಲ್ಲಿ ನೀಡಲಾಗುತ್ತದೆ. ಈಗ ದುಬಾರಿಯಾದರೂ ಮುಂದಿನ ದಿನಗಳಲ್ಲಿ ಈ ಚುಚ್ಚುಮದ್ದಿನ ವೆಚ್ಚ ಕಡಿಮೆಯಾಗಬಹುದು. ಎಲ್ಲಾ ರೋಗಿಗಳಿಗೆ ಅತ್ಯಗತ್ಯ ವಿಲ್ಲದಿದ್ದರೂ ಕನಿಷ್ಟ ಅತೀ ಅಗತ್ಯದ ರೋಗಿಗಳಿಗೆ ಚುಚ್ಚುಮದ್ದನ್ನು ನೀಡಿದಲ್ಲಿ ಹೃದಯಾಘಾತ ತಪ್ಪಿಸಲು ಸಾಧ್ಯವಾಗಬಹುದು ಎಂಬ ಅಶಾವಾದವನ್ನು ಹೃದಯ ತಜ್ಞರು ಹೊಂದಿದ್ದಾರೆ. ಈಗಾಗಲೇ ಬ್ರಿಟನ್ ಮತ್ತು ಅಮೆರಿಕಾದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ 50 ಶೇಕಡಾದಷ್ಟು ಕಡಿಮೆ ಮಾಡಿದೆ ಎಂದು ಅಧ್ಯಯನಗಳಿಂದ ವರದಿಯಾಗಿದೆ. ಆದರೆ ಹೃದಯಾಘಾತ ತಪ್ಪಿಸಲು ಎಷ್ಟು ಸಹಕಾರ ನೀಡಿದೆ ಎಂಬುದರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ. ಅದೇನೇ ಇರಲಿ ಕೊಲೆಸ್ಟ್ರಾಲ್ ನಿಯಂತ್ರಿಸಲು ಇನ್‍ಕ್ಲಿಸರಾನ್ ಎಂಬ ಬ್ರಹ್ಮಾಸ್ತ್ರ ವೈದ್ಯರ ಬತ್ತಳಿಕೆಗೆ ಸೇರಿಕೊಂಡಿರುವುದರಿಂದ ಹೊಸ ಆಶಾಭಾವನೆ ಮತ್ತು ಮಂದಹಾಸ ಜನರಲ್ಲಿ ಮೂಡಿದೆ.
ಡಾ|| ಮುರಲೀ ಮೋಹನ್‍ಚೂಂತಾರು
BDS, MDS,DNB,MOSRCSEd(U.K), FPFA, M.B.A
ಮೊ : 9845135787
[email protected]

Related Posts

Leave a Reply

Your email address will not be published.