ಮಂಗಳೂರು :’ಕ್ಲಾಸ್ ಆನ್ ವ್ಹೀಲ್ಸ್’ ಡಿಜಿಟಲ್ ಕಂಪ್ಯೂಟರ್ ಸಾಕ್ಷರತಾ ಬಸ್ಗೆ ಚಾಲನೆ
ಮಂಗಳೂರು: ಡಿಜಿಟಲ್ ಬಸ್ ಮೂಲಕ ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸುವ ‘ಕ್ಲಾಸ್ ಆನ್ ವ್ಹೀಲ್ಸ್’ ಡಿಜಿಟಲ್ ಕಂಪ್ಯೂಟರ್ ಸಾಕ್ಷರತಾ ಬಸ್ ಯೋಜನೆ ಸರಕಾರಕ್ಕೂ ಪ್ರೇರಣಾದಾಯಕ ಎಂದು ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಜೆಪ್ಪು ಸೈಂಟ್ ಜೋಸೆಫ್ಸ್ ಸೆಮಿನರಿ ಬಳಿಯ ಮರಿಯ ಜಯಂತಿ ಹಾಲ್ನಲ್ಲಿ ಶನಿವಾರ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನ ದಶಮಾನೋತ್ಸವದ ನಿಮಿತ್ತ ‘ಕ್ಲಾಸ್ ಆನ್ ವ್ಹೀಲ್ಸ್’ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಸಾಕ್ಷರತೆಯ ಡಿಜಿಟಲ್ ಬಸ್ಗೆ ಹಸಿರು ನಿಶಾನೆ ನೀಡಿ ಅವರು ಮಾತನಾಡಿದರು.ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪದವಿ ಶಿಕ್ಷಣ ಪಡೆದು ಕಂಪ್ಯೂಟರ್ ಜ್ಞಾನ ಇಲ್ಲದವರು ಅನಕ್ಷರಸ್ಥರಾಗಿಯೇ ಗುರುತಿಸಿಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಶಾಲಾ ಅಂಗಳದಲ್ಲಿಯೇ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸುವುದು ಕ್ರಾಂತಿಕಾರಿ ಯೋಜನೆ ಎಂದು ಅವರು ಹೇಳಿದರು.
ಕಾರುಣ್ಯ ಯೋಜನೆಯ ಮೂಲಕ ಗುರುತಿಸಿಕೊಂಡಿರುವ ಎಂಫ್ರೆಂಡ್ಸ್ ಸಂಸ್ಥೆಯು ಇದೀಗ ಕಂಪ್ಯೂಟರ್ ಶಿಕ್ಷಣದತ್ತ ಹೆಜ್ಜೆ ಇಡುವ ಮೂಲಕ ಶಿಕ್ಷಣ ಹಾಗೂ ಆರೋಗ್ಯದ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.
ಸಭಾ ಕಾರ್ಯಕ್ರಮದ ಸಂದರ್ಭ ಎಂಫ್ರೆಂಡ್ಸ್ನ ಡಿಜಿಟಲ್ ಬಸ್ ಯೋಜನೆಯ ಕುರಿತಾದ ಸಾಕ್ಷ್ಯ ಚಿತ್ರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನ ಅತೀ ಅಗತ್ಯವಾಗಿದ್ದು, ಎಂಫ್ರೆಂಡ್ಸ್ನಿಂದ ನಡೆಸಲಾಗುತ್ತಿರುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಎಲ್ಲರಿಗೂ ಪ್ರೇರಣೆ ನೀಡುವಂತದ್ದು ಎಂದರು.
ಎಂಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್., ರೋಹನ್ ಕಾರ್ಪೊರೇಶನ್ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ, ಉದ್ಯಮಿಗಳಾದ ಮುಹಮ್ಮದ್ ಅಲಿ ಉಚ್ಚಿಲ್, ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ಅಬ್ಬಾಸ್ ಉಚ್ಚಿಲ್, ಮೋಹನ್ ಬೆಂಗ್ರೆ, ಫ್ರಾನ್ಸಿಸ್ ಡೋರಿಸ್, ಅಬ್ದುಲ್ಲಾ ಮೋನು, ಉಮರ್ ಫಾರೂಕ್ ಜುಬೈಲ್, ಎಸ್.ಎಂ.ರಶೀದ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಡಿಜಿಟಲ್ ಕಂಪ್ಯೂಟರ್ ಬಸ್ಗೆ ರೂಪು ನೀಡಿರುವ ರಾಡ್ರಿಕ್ಸ್ ಕಂಪನಿಯ ಮಾಲೀಕ ನವೀನ್ ರಾಡ್ರಿಕ್ಸ್ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಎಂಫ್ರೆಂಡ್ಸ್ನ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.