ಕೇಂದ್ರ ಸರ್ಕಾರದ ವಿರುದ್ಧ ಅನ್ನದ ಬಟ್ಟಲು ಬಡಿದು ಎಚ್ಚರಿಕೆ : ಮಾಜಿ ಸಚಿವ ರಮಾನಾಥ ರೈ
ಬಡವರಿಗೆ ಅಕ್ಕಿ ನೀಡುವ ಯೋಜನೆಗೆ ಅಡ್ಡಿಪಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅನ್ನದ ಬಟ್ಟಲು ಬಡಿಯುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಲಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಡವರ ಅನ್ನಕ್ಕೆ ಕಲ್ಲು ಹಾಕುವವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ದೇಶದಲ್ಲೇ ಬಡವರಿಗೆ ಪ್ರಥಮವಾಗಿ ಉಚಿತವಾಗಿ ಅಕ್ಕಿ ನೀಡಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಆಹಾರ ಭದ್ರತಾ ಕಾಯ್ದೆ ಅನುಷ್ಠಾನಕ್ಕೆ ತಂದು ಬಡವರಿಗೆ ಅಕ್ಕಿ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಕಾಂಗ್ರೆಸ್ ಆಡಳಿತ ಇಲ್ಲದ ರಾಜ್ಯ ಸರಕಾರಗಳಿಗೆ ತಾರತಮ್ಯ ಮಾಡದೆ ಅಕ್ಕಿಯನ್ನು ನೀಡಿದೆ ಎಂದರು.
ದೇಶದಲ್ಲಿ ಪಡಿತರ ವ್ಯವಸ್ಥೆ ಮೊದಲು ಜಾರಿಗೆ ತಂದಿರುವುದು ಕಾಂಗ್ರೆಸ್ ಸರಕಾರ. ಯುಪಿಎ ಸರಕಾರ ಜಾರಿ ಮಾಡಿದ ಬಡವರಿಗೆ ಅಕ್ಕಿ ನೀಡುವ ಯೋಜನೆಯನ್ನು ಪ್ರಚಾರಕ್ಕಾಗಿ ಬಳಸಲಿಲ್ಲ. ಬಿಜೆಪಿ ನೇತೃತ್ವದ ಎನ್ ಡಿಎ ಅದನ್ನೂ ಪ್ರಚಾರಕ್ಕಾಗಿ ಬಳಸುತ್ತಿದೆ. ಕರ್ನಾಟಕ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೇಂದ್ರ ಆಹಾರ ನಿಗಮದಿಂದ ಮೊದಲು ಭರವಸೆ ನೀಡಿ ಬಳಿಕ ಅಕ್ಕಿ ನೀಡದಂತೆ ತಡೆ ಒಡ್ಡಿದೆ. ಇನ್ನಾದರೂ ಬಡವರ ಅನ್ನ ನೀಡುವ ಯೋಜನೆಗೆ ತಡೆ ಒಡ್ಡದೆ ಕೀಳು ಮಟ್ಟದ ರಾಜಕೀಯದಿಂದ ಹಿಂದೆ ಸರಿದು ಬಡವರಿಗೆ ಸಹಾಯ ನೀಡಲು ಕೇಂದ್ರ ಸರ್ಕಾರ ಮುಂದಾಗಲಿ ಎಂದು ರಮಾನಾಥ ರೈ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ನವೀನ್ ಡಿಸೋಜ, ಹರಿನಾಥ್, ಪ್ರಕಾಶ್ ಸಾಲ್ಯಾನ್, ಬೇಬಿ ಕುಂದರ್, ಅಪ್ಪಿ, ತನ್ವಿರ್ ಶಾ, ಜಯಶೀಲ ಅಡ್ಯಂತಾಯ, ತೇಜಸ್ವಿರಾಜ್, ಪಿಯೂಸ್ ರೋಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.